ಎಚ್-1ಬಿ ವೀಸಾದಾರರ ಸಂಗಾತಿಗಳ ಕೆಲಸ ಮಾಡುವ ಹಕ್ಕು ರಕ್ಷಿಸಲು ಮಸೂದೆ

Update: 2018-11-17 14:32 GMT

ವಾಶಿಂಗ್ಟನ್, ನ. 17: ಎಚ್1-ಬಿ ವೀಸಾದಾರರ ಸಂಗಾತಿಗಳು ಅಮೆರಿಕದಲ್ಲಿ ಕೆಲಸ ಮಾಡಲು ನೀಡಲಾಗಿರುವ ಅವಕಾಶವನ್ನು ಹಿಂದಕ್ಕೆ ಪಡೆದುಕೊಳ್ಳುವುದರಿಂದ ಟ್ರಂಪ್ ಆಡಳಿತವನ್ನು ತಡೆಯುವ ಉದ್ದೇಶದ ಮಸೂದೆಯೊಂದನ್ನು ಇಬ್ಬರು ಸಂಸದರು ಅಮೆರಿಕ ಕಾಂಗ್ರೆಸ್‌ನಲ್ಲಿ ಮಂಡಿಸಿದ್ದಾರೆ.

ಈ ಸೌಲಭ್ಯವನ್ನು ಹಿಂದಕ್ಕೆ ತೆಗೆದುಕೊಂಡರೆ ಹೆಚ್ಚಿನ ವಿದೇಶಿ ನೌಕರರು ತಮ್ಮ ಪ್ರತಿಭೆಯನ್ನು ಬೇರೆ ದೇಶಗಳಲ್ಲಿ ವ್ಯಕ್ತಪಡಿಸುತ್ತಾರೆ ಹಾಗೂ ಇದು ಅಮೆರಿಕಕ್ಕೆ ಪ್ರತಿಸ್ಪರ್ಧಿಗಳನ್ನು ಹುಟ್ಟು ಹಾಕುತ್ತದೆ ಎಂದು ಸಂಸದರಾದ ಆನಾ ಜಿ. ಇಶೂ ಮತ್ತು ರೆ ಲಾಫ್‌ಗ್ರೆನ್ ವಾದಿಸಿದ್ದಾರೆ.

ಅಮೆರಿಕದಲ್ಲಿ ಕೆಲಸ ಮಾಡುವ ಎಚ್-1ಬಿ ಉದ್ಯೋಗಿಗಳ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ. ಎಚ್-1ಬಿ ವೀಸಾ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ವಿದೇಶಿಯರಿಗೆ ಅಮೆರಿಕದಲ್ಲಿ ನೆಲೆಸಲು ಅವಕಾಶ ನೀಡುತ್ತದೆ. ಈ ವಿದೇಶಿಯರ ಪೈಕಿ ಭಾರತೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾರ ಆಡಳಿತವು ಎಚ್-4 ವೀಸಾದಾರರಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಅನುಮೋದನೆ ನೀಡಿತ್ತು.

ಆದರೆ, ಅವರ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ಇದರ ವಿರುದ್ಧ ಕೆಂಡ ಕಾರಿದ್ದರು ಹಾಗೂ ಅದನ್ನು ರದ್ದುಪಡಿಸಲು ಉದ್ದೇಶಿಸಿದ್ದರು.

ಎಚ್-4 ವೀಸಾದಾರರು ಕೆಲಸ ಮಾಡಲು ಅವಕಾಶ ನೀಡುವ ಕಾನೂನು ಜಾರಿಗೆ ಬಂದಂದಿನಿಂದ 1 ಲಕ್ಷಕ್ಕೂ ಅಧಿಕ ಮಂದಿ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶ ಹೊಂದಿದ್ದಾರೆ. ಅವರ ಪೈಕಿ ಹೆಚ್ಚಿನವರು ಮಹಿಳೆಯರು ಹಾಗೂ ಅದರಲ್ಲೂ ಹೆಚ್ಚಾಗಿ ಭಾರತೀಯರು.

ಈ ಕಾನೂನು ಅಮೆರಿಕದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿದೆ ಹಾಗೂ ಸಾವಿರಾರು ಎಚ್-1ಬಿ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ ಎಂಬುದಾಗಿ ಮಸೂದೆಯನ್ನು ಮಂಡಿಸಿದ ಬಳಿಕ ಸಂಸದರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News