ಆಸ್ಟ್ರೇಲಿಯ ವಿರುದ್ಧ ದಕ್ಷಿಣ ಆಫ್ರಿಕ ಜಯಭೇರಿ

Update: 2018-11-17 18:29 GMT

ಗೋಲ್ಡ್‌ಕೋಸ್ಟ್, ನ.17: ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧದ ಮಳೆಬಾಧಿತ ಏಕೈಕ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದೆ.

ಮಳೆಯಿಂದಾಗಿ 10 ಓವರ್‌ಗಳಿಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ಗೆಲ್ಲಲು 109 ರನ್ ಗುರಿ ಪಡೆದ ಆಸ್ಟ್ರೇಲಿಯ 7 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯ ಸತತ 4ನೇ ಟ್ವೆಂಟಿ-20 ಪಂದ್ಯವನ್ನು ಸೋತಿದೆ. ಇತ್ತೀಚೆಗೆ ಪಾಕ್ ವಿರುದ್ದ ಯುಎಇಯಲ್ಲಿ ಆಡಿದ್ದ 3 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿತ್ತು. ಆಸೀಸ್ ಪರ ಆಲ್‌ರೌಂಡರ್ ಮ್ಯಾಕ್ಸ್‌ವೆಲ್(38,23 ಎಸೆತ, 2 ಬೌಂಡರಿ, 2 ಸಿಕ್ಸರ್)ಏಕಾಂಗಿ ಹೋರಾಟ ನೀಡಿದರು. ಬೌಲಿಂಗ್‌ನಲ್ಲಿ 14 ರನ್‌ಗೆ 1 ವಿಕೆಟ್ ಪಡೆದಿದ್ದ ಮ್ಯಾಕ್ಸ್‌ವೆಲ್ ಆಲ್‌ರೌಂಡ್ ಆಟ ವ್ಯರ್ಥವಾಯಿತು.

ದಕ್ಷಿಣ ಆಫ್ರಿಕದ ಪರ ಕ್ರಿಸ್ ಮೊರಿಸ್(2-12), ಲುಂಗಿ ಗಿಡಿ(2-16),ಪೆಹ್ಲುಕ್ವಾವೊ(2-21) ತಲಾ ಎರಡು ವಿಕೆಟ್ ಪಡೆದರು. 2 ಓವರ್‌ಗಳಲ್ಲಿ 12 ರನ್ ನೀಡಿ 1 ವಿಕೆಟ್ ಪಡೆದ ತಬ್ರೈಝ್ ಶಂಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಏಳು ತಿಂಗಳ ಹಿಂದೆ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸಿದ್ದ ಗೋಲ್ಡ್‌ಕೋಸ್ಟ್ ಸ್ಟೇಡಿಯಂನಲ್ಲಿ ಮೊದಲ ಬಾರಿ ಟ್ವೆಂಟಿ-20 ಕ್ರಿಕೆಟ್ ಆಯೋಜಿಸಲಾಗಿತ್ತು. ಆದರೆ,ಭಾರೀ ಮಳೆ ಸುರಿದ ಕಾರಣ ಪಂದ್ಯ ಸುಮಾರು 2 ಗಂಟೆ ವಿಳಂಬವಾಗಿ ಆರಂಭವಾಯಿತು. ಪಂದ್ಯವನ್ನು ತಲಾ 10 ಓವರ್‌ಗೆ ಕಡಿತಗೊಳಿಸಲಾಯಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕ ತಂಡ 10 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 108 ರನ್ ಗಳಿಸಿತು. 3 ಓವರ್‌ಗಳ ಪವರ್‌ಪ್ಲೇಯಲ್ಲಿ 42 ರನ್ ಕಲೆ ಹಾಕಿ ಉತ್ತಮ ಆರಂಭ ಪಡೆಯಿತು.

ನಾಯಕ ಎಫ್‌ಡು ಪ್ಲೆಸಿಸ್(27,15 ಎಸೆತ, 4 ಬೌಂಡರಿ),ಆರಂಭಿಕ ಆಟಗಾರರಾದ ಕ್ವಿಂಟನ್ ಡಿಕಾಕ್(22,16 ಎಸೆತ, 2 ಸಿಕ್ಸರ್) ಹಾಗೂ ಹೆಂಡ್ರಿಕ್ಸ್(19,8 ಎಸೆತ, 3 ಬೌಂಡರಿ, 1 ಸಿಕ್ಸರ್)ಆಫ್ರಿಕ ಇನಿಂಗ್ಸ್‌ಗೆ ಆಧಾರವಾದರು.

ಆಸೀಸ್ ಪರ ಆ್ಯಂಡ್ರೂ ಟೈ(2-18) ಹಾಗೂ ಕೌಲ್ಟರ್ ನೀಲ್(2-19)ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ದಕ್ಷಿಣ ಆಫ್ರಿಕ: 10 ಓವರ್‌ಗಳಲ್ಲಿ 108/6

(ಪ್ಲೆಸಿಸ್ 27, ಡಿಕಾಕ್ 22, ಟೈ 2-18, ಕೌಲ್ಟರ್ ನೀಲ್ 2-19)

►ಆಸ್ಟ್ರೇಲಿಯ: 10 ಓವರ್‌ಗಳಲ್ಲಿ 87/7

(ಮ್ಯಾಕ್ಸ್‌ವೆಲ್ 38, ಲಿನ್ 14, ಮೊರಿಸ್ 2-12, ಲುಂಗಿ ನಿಗಿಡಿ 2-16, ಪೆಹ್ಲುಕ್ವಾಯೊ 2-21)

►ಪಂದ್ಯಶ್ರೇಷ್ಠ: ತಬ್ರೈಝ್ ಶಂಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News