ಟೆಸ್ಟ್: ನ್ಯೂಝಿಲೆಂಡ್ ‘ಎ’ ವಿರುದ್ಧ ಭಾರತ ‘ಎ’ 467/8 ಡಿಕ್ಲೇರ್

Update: 2018-11-17 18:33 GMT

ಹ್ಯಾಮಿಲ್ಟನ್, ನ.17: ಇಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 467 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ವಿಕೆಟ್‌ಕೀಪರ್ -ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್(94)ಸರ್ವಾಧಿಕ ಸ್ಕೋರ್ ಗಳಿಸಿದ್ದಾರೆ.

ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೆಳ ಕ್ರಮಾಂಕದ ದಾಂಡಿಗರ ಉಪಯುಕ್ತ ಕೊಡುಗೆ ನೆರವಿನಿಂದ ಸ್ಪರ್ಧಾತ್ಮಕ ಸ್ಕೋರ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ಕಿವೀಸ್ ಪರ ಮಧ್ಯಮ ವೇಗದ ಬೌಲರ್ ಬ್ಲೈರ್ ಟಿಕ್ನೆರ್(4-80)ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಭಾರತದ ಮೊದಲ ಇನಿಂಗ್ಸ್‌ಗೆ ದಿಟ್ಟ ಉತ್ತರ ನೀಡಲು ಮುಂದಾಗಿರುವ ನ್ಯೂಝಿಲೆಂಡ್ 2ನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ. ಆರಂಭಿಕ ಆಟಗಾರ ಹ್ಯಾಮಿಶ್ ರುಥರ್‌ಫೋರ್ಡ್ 169 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಿತ 106 ರನ್ ಗಳಿಸಿದ್ದಾರೆ. ಹ್ಯಾಮಿಶ್ ಹಾಗೂ ವಿಲ್ ಯಂಗ್(49)ಮೊದಲ ವಿಕೆಟ್‌ಗೆ 121 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದಾರೆ. ಈ ಜೋಡಿಯನ್ನು ಕೆ.ಗೌತಮ್ ಬೇರ್ಪಡಿಸಿದರು.

ಇದಕ್ಕೂ ಮೊದಲು ಪ್ರವಾಸಿ ಭಾರತ 5 ವಿಕೆಟ್‌ಗೆ 380 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಆರು ರನ್‌ನಿಂದ ಶತಕ ವಂಚಿತರಾದ ಪಟೇಲ್(94)ಟಿಕ್ನೆರ್‌ಗೆ ವಿಕೆಟ್ ಒಪ್ಪಿಸಿದರು. ಟಿಕ್ನೆರ್ ಅವರು ಮುರಳಿ ವಿಜಯ್ ಹಾಗೂ ಮಯಾಂಕ್ ಅಗರ್ವಾಲ್ ವಿಕೆಟನ್ನು ಪಡೆದಿದ್ದಾರೆ.

ಪಟೇಲ್ ನಿರ್ಗಮನದ ಬಳಿಕ ವಿಜಯ್ ಶಂಕರ್(62) ಹಾಗೂ ಕೆ.ಗೌತಮ್(47)ಕೆಳ ಕ್ರಮಾಂಕದಲ್ಲಿ ಉತ್ತಮ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News