ಮಿರ್ಜಿ ಅಣ್ಣಾರಾಯರು-ಗತಕಾಲದ ಒಂದು ಮಾದರಿ

Update: 2018-11-17 18:34 GMT

ಖಾಸಗಿ ಬದುಕು ಮತ್ತು ಸಾಹಿತ್ಯಗಳೆರಡರಲ್ಲೂ ಆದರ್ಶಪ್ರಾಯರಾಗಿದ್ದ ಮಿರ್ಜಿ ಅಣ್ಣಾರಾಯರ ಜೀವನಗಾಥೆ ಸ್ಮರಣಯೋಗ್ಯವಾದುದು. ಕನ್ನಡ ಸಂಸ್ಕೃತಿಯ ಗತಕಾಲದ ಒಂದು ಮಾದರಿ ಎನ್ನಬಹುದಾದ ಅಣ್ಣಾರಾಯರ ಜನ್ಮ ಶತಾಬ್ದಿ ವರ್ಷವಿದು. ಅವರ ಜನ್ಮ ಶತಾಬ್ದಿ ಆಚರಣೆಯ ಸುದ್ದಿಸೂರು ಏನೂ ಕೇಳಿಬರುತ್ತಿಲ್ಲ. 1935ರಿಂದ 1975ರವರೆಗೆ ಅವರು ಅವಿಚ್ಛಿನ್ನ ಸಂಬಂಧ ಹೊಂದಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗಾಗಲೀ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಲೀ ಮಿರ್ಜಿಯವರ ನೆನಪಾದಂತಿಲ್ಲ.


ಕಾಲ ಪ್ರವಾಹದಿಂದಾಗಿ ನೇಪಥ್ಯಕ್ಕೆ ಸರಿದು, ಕನ್ನಡಿಗರ ಮರೆವಿನ ಲೋಕಕ್ಕೆ ಸಂದಿರುವ ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಕನ್ನಡದ ಗಣ್ಯ ಸಾಹಿತಿಗಳ ಯಾದಿಯಲ್ಲಿ ಒಂದು ಮುಖ್ಯ ಹೆಸರು ಮಿರ್ಜಿ ಅಣ್ಣಾ ರಾಯರು. ಸೃಜನಶೀಲ ಲೇಖಕರಾಗಿ, ಸಂಶೋಧಕರಾಗಿ, ವಿದ್ವಾಂಸರಾಗಿ ಕನ್ನಡ ಕಥಾ ಸಾಹಿತ್ಯ ಮತ್ತು ಜೈನ ಧರ್ಮ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿರುವ ಅಣ್ಣಾರಾಯರು ಇಂದು ನಮ್ಮ ನಡುವೆ ಇದ್ದಿದ್ದರೆ ಅವರಿಗೆ ಪ್ರಾಯ ನೂರು ತುಂಬುತ್ತಿತ್ತು.

ನವೋದಯ ಮತ್ತು ಪ್ರಗತಿಶೀಲ ಹಾಗೂ ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಣ ಸೇತುವಿನಂತಿದ್ದ ಮಿರ್ಜಿ ಅಣ್ಣಾರಾಯರು ಜನಿಸಿದ್ದು, 1918ರ ಆಗಸ್ಟ್ 25ರಂದು ಬೆಳಗಾವಿ ಜಿಲ್ಲೆಯ ಸೇಡಬಾಳ ಗ್ರಾಮದಲ್ಲಿ. ಅಣ್ಣಾರಾಯರ ಹೆಸರಿಗೆ ಪೂರ್ವಪ್ರತ್ಯವಾಗಿರುವ ಮಿರ್ಜಿ ಅವರ ಪೂರ್ವಜರಿದ್ದ ಊರು. ಹತ್ತೊಂಬತ್ತನೇ ಶತಮಾನದಲ್ಲೇ ಅಣ್ಣಾರಾಯರ ತಾತಂದಿರು ಕರ್ನಾಟಕದ ಗಡಿಯಲ್ಲಿರುವ ಮಹಾರಾಷ್ಟ್ರದ ಮಿರ್ಜಿ ತೊರೆದು ಸೇಡಬಾಳಕ್ಕೆ ಬಂದು ನೆಲಸಿದರು.ಅವರದು ಕೃಷಿಕ ಮನೆತನ. ಅಣ್ಣಾರಾಯರ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ನಡೆದದ್ದು ಮಠದ ಶಾಲೆಯಲ್ಲಿ. ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಮುಂದಿನದೆಲ್ಲ ಸ್ವಾಧ್ಯಾಯ. ಹೀಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಜಾಣ’, ‘ಕಾವ’ ಪರೀಕ್ಷೆಗಳನ್ನು ಗೆದ್ದು ಕನ್ನಡದ ಜಾಣರಾದರು. 1939ರಲ್ಲಿ ಪ್ರಾಥಮಿಕ ಶಾಲೆಯ ಉದ್ಯೋಗ ವೃತ್ತಿ ಅರಸಿ ಬಂತು. ಪ್ರಾಥಮಿಕ ಶಾಲೆಯಲ್ಲಿ ಪಾಠ ಹೇಳುತ್ತಲೇ ಸ್ವಾಧ್ಯಾಯ ಮುಂದುವರಿಸಿ ಕನ್ನಡ, ಮರಾಠಿ, ಹಿಂದಿ ಭಾಷೆಗಳಲ್ಲಿ ಓದಿ ಬರೆಯುವ ಪರಿಣತಿ ಪಡೆದರು. ಜೊತೆಗೆ ಸಂಸ್ಕೃತ ಮತ್ತು ಪ್ರಾಕೃತಗಳ ಪರಿಶ್ರಮವಿತ್ತು. ಈ ಕಾಲದಲ್ಲೇ ಘನವಿದ್ವಾಂಸರಾದ ಆ.ನೇ.ಉಪಾಧ್ಯಾಯರ ಮಾರ್ಗದರ್ಶನ ಲಭಿಸಿ ಜೈನ ಸಾಹಿತ್ಯದ ಪ್ರೌಢ ಕೃತಿಗಳ ಅಧ್ಯಯನ ನಡೆಸಿದರು. ಮಾಸ್ತರಿಕೆ ಮತ್ತು ಓದುಗಳ ಮಧ್ಯೆ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದ ಕಾಯಕದಲ್ಲಿ ತೊಡಿಗಿಕೊಂಡದ್ದೂ ಉಂಟು. ದಿವಾಕರ ರಂಗರಾಯರ ಆದೇಶದಂತೆ ಸ್ವಾತಂತ್ರ್ಯ ಚಳವಳಿಯ ಕರಪತ್ರಗಳ ಮುದ್ರಣ, ಹಂಚಿಕೆಯ ಕೆಲಸವನ್ನೂ ಮಾಡಿದರು. ಜೈನಾಗಮ, ಹಳಗನ್ನಡ ಸಾಹಿತ್ಯದ ಅಧ್ಯಯನ ಯುವಕ ಅಣ್ಣಾರಾಯರೊಳಗೆ ಸುಪ್ತವಾಗಿದ್ದ ಸೃಜನಶೀಲ ಪ್ರತಿಭೆಗೆ ಪುಟಕೊಟ್ಟಿರಬೇಕು.

ಜಯಂತಿ, ಜಯಕರ್ನಾಟಕ, ಪಬುದ್ಧ ಕರ್ನಾಟಕ ಪತ್ರಿಕೆಗಳಿಗೆ ಬರೆಯಲಾರಂಭಿಸಿದರು. ಇಂಥ ಮೊದಲ ಪ್ರಯತ್ನದಲ್ಲೇ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅವರ ‘ಕನ್ನಡ ಸಾಹಿತ್ಯದಲ್ಲಿ ಜೈನ ಯುಗ’ ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ಇದರಿಂದ ಯುವ ಲೇಖಕ ಅಣ್ಣಾರಾಯರ ಸೃಜನಶೀಲ ರೆಕ್ಕೆಪುಕ್ಕಗಳಿಗೆ ನೀರೆರೆದಂತಾಯಿತು. 1945ರಲ್ಲಿ ಮೊದಲ ಕಾದಂಬರಿ ‘ನಿಸರ್ಗ’ ಪ್ರಕಟವಾಯಿತು.ಸಾಮಾಜಿಕ ಬದಲಾವಣೆಯ ತುಡಿತದ ವಸ್ತುವಿನ ಸಹಜತೆ, ದೇಸಿ ಭಾಷೆ, ಗ್ರಾಮೀಣ ಜೀವನದ ಸೊಗಡು, ಕಲಾತ್ಮಕ ನಿರೂಪಣೆ ಮೊದಲಾದ ವೈಶಿಷ್ಟ್ಯಗಳಿಂದ ಪಂಡಿತಪಾಮರರಿಬ್ಬರ ಹೃದಯವನ್ನೂ ಸೂರೆಗೊಂಡ ‘ನಿಸರ್ಗ’ ಬೆಳಗಾಗುವುದರಲ್ಲಿ ಅಣ್ಣರಾಯರನ್ನು ಕನ್ನಡದ ಪ್ರಗತಿಶೀಲ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲಿಸಿತ್ತು. ‘‘ನಿಸರ್ಗ, ಜೀವನದ ಒಂದು ಕೈಪಿಡಿ. ಸಮಾಜಸ್ಥಿತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಬೇಕೆಂದು ಇಚ್ಛಿಸುವವರು ಹೊಸ ನಾಡನ್ನು ನಿರ್ಮಿಸಬೇಕೆಂದು ಹಂಬಲಿಸುವವರು ಅವಶ್ಯ ಓದಬೇಕಾದ ಕಾದಂಬರಿ ‘ನಿಸರ್ಗ’...ಒಂದು ಸುಂದರ ಕಾವ್ಯ’’ ಎಂದು ನಿರಂಜನರ ಪ್ರಶಂಸೆ ಗಿಟ್ಟಿಸಿಕೊಂಡ ‘ನಿಸರ್ಗ’ ದೇವರಾಜ ಬಹದ್ದೂರ್ ಪಾರಿತೋಷಕ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮುಂಬೈ ಸರಕಾರದ ಪ್ರಶಸ್ತಿ ಮೊದಲಾದ ಮನ್ನಣೆಗಳಿಗೆ ಪಾತ್ರವಾಯಿತು. ನಂತರ ಅಣ್ಣಾರಾಯರು ಹಿಂದಿರುಗಿ ನೋಡಿದ್ದೇ ಇಲ್ಲ. ‘ರಾಷ್ಟ್ರ ಪುರುಷ’(1947), ‘ರಾಮಣ್ಣ ಮಾಸ್ತರ’(1948).‘ಅಶೋಕ ಚಕ್ರ’(1948), ‘ಶ್ರೇಯಾಂಸ’(ಎರಡು ಭಾಗಗಳಲ್ಲಿ-1954),ಎರಡು ಹೆಜ್ಜೆ(1954), ‘ಹದಗೆಟ್ಟ ಹಳ್ಳಿ’(1965),‘ಭಸ್ಮಾಸುರ’(1949) ಮುಂತಾದವು ಅಣ್ಣಾರಾಯರ ಸಾಮಾಜಿಕ ಕಾದಂಬರಿಗಳು.

ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂ ಭ್ರಾತೃತ್ವವೂ ಬೆಸೆದುಕೊಂಡಿತ್ತೆಂಬ ಸತ್ಯವನ್ನು ಪ್ರತಿಪಾದಿಸುವ ‘ರಾಷ್ಟ್ರಪುರುಷ’ ಒಂದು ಉದಾತ್ತ ಕಾದಂಬರಿ. ‘ರಾಮಣ್ಣ ಮಾಸ್ತರು’, ಹಳ್ಳಿಯ ಶಾಲೆಯ ಮಾಸ್ತರಿಕೆಯ ಒಂದು ಚಿಕ್ಕ ಕಾವ್ಯವಾದರೆ, ಮತ್ತೊಬ್ಬ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರಿಂದ ಪ್ರಥಮ ವರ್ಗದ ಕಾದಂಬರಿ ಎಂದು ಬೆನ್ನು ತಟ್ಟಿಸಿಕೊಂಡಿರುವ ‘ಅಶೋಕ ಚಕ’್ರ, ಆರ್ಥಿಕ ಅಸಮಾನತೆಯನ್ನೂ ಗ್ರಾಮೀಣ ಬಡಬಗ್ಗರ ಶೋಷಣೆಯನ್ನೂ ಹೃದಯವಿದ್ರಾವಕವಾಗಿ ಚಿತ್ರಿಸುವ ಕಾದಂಬರಿ.

‘ಸಾಮ್ರಾಟ್ ಶ್ರೇಣಿಕ’, ‘ಚಾವುಂಡ ರಾಯ’, ‘ಸಿದ್ಧಚಕ್ರ’- ಅಣ್ಣಾರಾಯರ ಐತಿಹಾಸಿಕ ಕಾದಂಬರಿಗಳಾದರೆ, ‘ಋಷಭ ದೇವ’ ಪೌರಾಣಿಕ ಕಾದಂಬರಿ. ‘ಪ್ರಣಯ ಸಮಾಧಿ’, ‘ಅಮರ ಕಥೆಗಳು’, ವಿಜಯಶ್ರೀ-ಕಥಾ ಸಂಕಲನಗಳು. ಐವತ್ತಕ್ಕೂ ಹೆಚ್ಚು ಕೃತಿಗಳ ಲೇಖಕರಾದ ಅಣ್ಣಾರಾಯರು ಮಹಾಪುರುಷರ ವ್ಯಕ್ತಿ ಚಿತಗಳ ರಚನೆಯಲ್ಲೂ ಸಿದ್ಧಹಸ್ತರೆಂದು ವಿಮರ್ಶಕರ ಮೆಚ್ಚುಗೆ ಗಳಿಸಿದವರು. ‘ಮಹಾಪುರುಷ’, ‘ಭಗವಾನ್ ಮಹಾವೀರ’, ‘ಬುದ್ಧನ ಕಥೆ’, ‘ಮುಹಮ್ಮದ್ ಪ್ಯಗಂಬರ್’, ‘ತೀರ್ಥಂಕರ ಮಹಾವೀರ’, ‘ಶ್ರೀ ಶಾಂತಿ ಸಾಗರ’ ಇವೇ ಮೊದಲಾದವು ಉಲ್ಲೇಖನಾರ್ಹ ಜಿವನಚರಿತ್ರೆಗಳು. ವಿಮರ್ಶೆಯ ಸ್ವರೂಪ, ಭರತೇಶನ ನಾಲ್ಕು ಚಿತ್ರಗಳು, ದತ್ತ ವಾಣಿ, ಕನ್ನಡ ಸಾಹಿತ್ಯದ ಒಲವುಗಳು ಅಣ್ಣಾರಾಯರ ವಿಮರ್ಶಾ ಕೃತಿಗಳು. ಅಣ್ಣಾರಾಯರ ಸೃಜನಶೀಲ ಪ್ರತಿಭೆ ಮತ್ತು ಸಂವೇದನೆಗಳು ಉನ್ನತ ಮಟ್ಟದಲ್ಲಿ ಮೆರೆದಿರುವುದನ್ನು ಅವರ ಕಥೆ-ಕಾದಂಬರಿ ಮತ್ತು ಜೀವನ ಚರಿತ್ರೆಗಳಲ್ಲಿ ಕಾಣಬಹುದು. ಅಂತೆಯೇ ಅವರ ಪಾಂಡಿತ್ಯ ಮತ್ತು ಸಂಶೋಧನೆಗಳಿಗೆ ಉಜ್ವಲ ನಿದರ್ಶನವಾಗಿ ಜೈನ ಧರ್ಮ ಕುರಿತ ಕೃತಿಗಳನ್ನು ಗಮನಿಸಬಹುದು. ಪ್ರಾಚೀನ ಜೈನ ಕಾವ್ಯಗಳನ್ನು ಶೋಧಿಸಿ ಪರಿಷ್ಕರಿಸಿ ಪ್ರಕಟಿಸಿರುವುದರ ಜೊತಗೆ ಜೈನ ಧರ್ಮ ಕುರಿತು ಸ್ವತಂತ್ರ ಗ್ರಂಥಗಳನ್ನು ರಚಿಸಿರುವುದು ಅಣ್ಣಾರಾಯರ ವಿಶಿಷ್ಟ ಅಗ್ಗಳಿಕೆಯಾಗಿದೆ. ‘ಚಿನ್ಮಯ ಚಿಂತಾಮಣಿ’, ‘ದಶಭಕ್ತಿ’, ‘ಭರತೇಶ ವೈಭವದ ಶೋಭನಸಂಧಿಗಳು’, ‘ರವಿಶೇಣನ ಜನತಾ ರಾಮಾಯಣ’, ‘ರತ್ನಕರಂಡಕ ಶ್ರಾವಕಾಚಾರ’ ಅಣ್ಣಾರಾಯರು ಪರಿಷ್ಕರಿಸಿ ಪ್ರಕಟಿಸಿರುವ ಪ್ರಮುಖ ಪ್ರಾಚೀನ ಜೈನ ಗ್ರಂಥಗಳು. ಆಳವಾದ ಸಂಶೋಧನೆ ಮತ್ತು ಅಧ್ಯಯನಗಳ ಫಲವೆಂದು ಪರಿಗಣಿಸಲಾಗಿರುವ ‘ಜೈನಧರ್ಮ’, ಅಣ್ಣರಾಯರ ಜೈನ ಸಾಹಿತ್ಯ ಮಾಲಿಕೆಯಲ್ಲಿ ಮೇರುಕೃತಿ.

ಜೈನ ಪುರಾಣಗಳನ್ನು ಅರ್ಥೈಸಲು ಉತ್ತಮ ಪ್ರವೇಶಿಕೆ ಎನ್ನಲಾದ ‘ಜೈನ ಧರ್ಮ’, ಭಾರತದಲ್ಲಿನ ಜೈನ ಧರ್ಮದ ಇತಿಹಾಸ, ಆಗಮಗಳು, ಆತ್ಮಮೀಮಾಂಸೆ, ಕರ್ಮ ವಿಜ್ಞಾನ, ಅಸಾಧಕನ ಗುಣಸ್ಥಾನ, ಸಂಸ್ಕೃತಿ, ಸಾಹಿತ್ಯ ಇತರ ಧಾರ್ಮಿಕ ಸಾಹಿತ್ಯಗಳೊಂದಿಗೆ ತೌಲನಿಕ ಅಧ್ಯಯನ ಇವೆಲ್ಲವನ್ನೂ ಒಳಗೊಂಡ 900 ಪುಟಗಳ ಉದ್ಗ್ರಂಥ. ಅಣ್ಣಾರಾಯರ ಜೈನ ಸಾಹಿತ್ಯ ಸಂಶೋಧನೆಯ ಮತ್ತೊಂದು ಹಿರಿದಾದ ಕೊಡುಗೆ ‘ರತ್ನಕರಂಡಕ ಶ್ರಾವಕಾಚಾರ’(1960), ರವಿಶೇಣನ ರಾಮಾಯಣ, ಮಹಾಪುರಾಣಸಾರ ಅಣ್ಣಾರಾಯರು ಸಂಸ್ಕೃತದಿಂದ ಕನ್ನಡಕ್ಕೆ ತಂದಿರುವ ಮಹತ್ವದ ಕೃತಿಗಳು. ಅಣ್ಣಾರಾಯರು ಡಾ.ಆ.ನೇ.ಉಪಾಧ್ಯಾಯರ ಸೂಚನೆಗಳೊಂದಿಗೆ ಕನ್ನಡಕ್ಕೆ ಅನುವಾದಿಸಿರುವ ‘ರತ್ನಕರಂಡಕ ಶ್ರಾವಕಾಚಾರ’, ಪ್ರಕಾಂಡ ಪಂಡಿತರೆಂದು ಸಾಹಿತ್ಯ ಚರಿತೆಯಲ್ಲಿ ಸ್ಥಾನಗಳಿಸಿರುವ ಸಮಂತ ಭದ್ರಾಚಾರ್ಯರ ಉತ್ಕೃಷ್ಟ ಕೃತಿ. ಡಾ.ಹೀರಲಾಲ್ ಜೈನ್ ಅವರ ‘ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ’ ಅಣ್ಣಾರಾಯರ ಮತ್ತೊಂದು ಮಹತ್ವದ ಅನುವಾದಿತ ಕೃತಿ.

ಮಿರ್ಜಿ ಅಣ್ಣಾರಾಯರು ಸಾಹಿತಿಯಾಗಿ ಸಾರಸ್ವತ ಪ್ರಪಂಚದಲ್ಲಿ ಖ್ಯಾತರಾದಂತೆಯೇ ವ್ಯಕ್ತಿಯಾಗಿ ಸಾರ್ವಜನಿಕ ಜೀವನದಲ್ಲೂ ಪ್ರಗತಿಪರ ವಿಚಾರಧಾರೆಯಿಂದ ಪ್ರಖ್ಯಾತರಾಗಿದ್ದರು. ಅಜಾತ ಶತ್ರುವೆನಿಸಿದ ‘ಮಿರ್ಜಿ ಮಾಸ್ತರರು’ ಸೇಡಬಾಳದ ಸುತ್ತಮುತ್ತಣ ಹಳ್ಳಗಳ ಹತ್ತುಸಮಸ್ತರಿಗೆ ಆತ್ಮೀಯ ಸಂಗಾತಿಯಾಗಿದ್ದರು.ಕಿರಿಯರಿಗೆ ಅಕ್ಕರೆಯ ಮಾಸ್ತರನಾಗಿ, ಹಿರಿಯರಿಗೆ ಪ್ರಗತಿಪರ ಮಾರ್ಗದರ್ಶಿಯಾಗಿದ್ದ ಅಣ್ಣಾರಾಯರು ಕಾಯಾವಾಚಾಮನಸಾ ಶಾರದೆಯ ಸೇವಕರು, ಜನತೆಯ ಸೇವಕರು ಎಂದು ಗೌರವ ಮನ್ನಣೆಗಳನ್ನು ಗಳಿಸಿದ್ದರು. ಸಮಾಜದ ಮಾನ್ಯತೆಯೊಂದಿಗೆ ಸರಕಾರದ ಆದರ್ಶ ಶಿಕ್ಷಕ ಪ್ರಶಸ್ತಿಯ ಗರಿ ಅವರ ಟೊಪ್ಪಿಗೆಯಲ್ಲಿ ಫಳಫಳಿಸುತ್ತಿತ್ತು. ಸಾಹಿತ್ಯೋಪಾಸಕರಾಗಿದ್ದ ಮಿರ್ಜಿ ಅಣ್ಣಾರಾಯರ ಮುಖ್ಯ ಕಾಳಜಿ ಸಾಹಿತ್ಯರಚನೆಗಷ್ಟೇ ಸೀಮಿತವಾಗಿರಲಿಲ್ಲ. ವೃತ್ತಿಯಿಂದ ಮಾಸ್ತರರೂ ಪ್ರವೃತ್ತಿಯಿಂದ ಸಾಹಿತಿಯೂ ಆಗಿದ್ದ ಅಣ್ಣಾರಾಯರು ಪೂರ್ವಜರಿಂದ ಬಂದ ಒಕ್ಕಲುತನವನ್ನೂ ಬಿಟ್ಟವರಲ್ಲ. ಕೃಷಿಕರೂ ಆಗಿ ಹಳ್ಳಿಯ ಒಕ್ಕಲುಮಕ್ಕಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಳಗಾವಿ ಜಿಲ್ಲೆಯ ದೇಸಿ ಭಾಷೆ ಮತ್ತು ಜಾನಪದ ಆಚರಣೆಗಳಲ್ಲಿ ಅಣ್ಣಾರಾಯಗೆ ವಿಶೇಷ ಆಸಕ್ತಿ ಇತ್ತು.

ಗ್ರಾಮೀಣ ಪ್ರದೇಶದ ಜಾನಪದ ಸಂಸ್ಕೃತಿಯ ಪಾಲನೆಪೋಷಣೆ ಮತ್ತು ಸಾಂಸ್ಕೃತಿಕ ಆಸಕ್ತಿಯನ್ನು ಸಂಘಟಿಸುವ ಮುಖ್ಯ ಉದ್ದೇಶ ಅವರದಾಗಿತ್ತು. ಎಂದೇ ಹುಟ್ಟೂರಾದ ಸೇಡಬಾಳದಲ್ಲಿ ‘ಶಾಂತಿ ಸೇವಾ ಸದನ’ ಎಂಬ ಸಾಂಸ್ಕೃತಿಕ ಸಂಸ್ಥೆ ಸ್ಥಾಪಿಸಿದರು. ಜಾನಪದ ಸಂಸ್ಕೃತಿ ರಕ್ಷಣೆಯ ಜೊತೆಗೆ ಹೊಸ ತಲೆಮಾರಿನ ಲೇಖಕರನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಮುಖ್ಯ ಆಶಯವಾಗಿತ್ತು.ಉದಯೋನ್ಮುಖ ಲೇಖಕರ ಪುಸ್ತಕಗಳ ಪ್ರಕಟನೆಗೆ ನೆರವಾಗುತ್ತಿದ್ದುದು ‘ಶಾಂತಿ ಸೇವಾ ಸದನ’ದ ಸಾಹಿತ್ಯ ಪರಿಚಾರಿಕೆಯ ಮುಖ. ಪುಸ್ತಕ ಪ್ರಕಟನೆೆ, ಉಪನ್ಯಾಸಗಳು, ಹೊಸಬರಹಗಾರರಿಗೆ ತರಬೇತಿ ಶಿಬಿರಗಳನ್ನು ನಡೆಸುವುದು ಶಾಂತಿ ಸೇವಾ ಸದನದ ಮುಖ್ಯ ಚಟುವಟಿಕೆಗಳಾಗಿದ್ದವು. 1970ರಲ್ಲಿ ಸಾಹಿತ್ಯ ಪ್ರಸಾರದ ಮುಖ್ಯ ಉದ್ದೇಶದಿಂದ ‘ಚಂದ್ರಗಂಗಾ ಜ್ಞಾನಪೀಠ’ ಎಂಬ ವಿನೂತನ ಪೀಠ ಪ್ರಾರಂಭಿಸಿದರು.

ಸಾರ್ವಜನಿಕ ಗ್ರಂಥಾಲಯ, ಸಾಹಿತಿಗಳಿಗೆ ತಂಗುಮನೆ, ಸಂಶೋಧನೆಗೆ ನೆರವು, ಪ್ರಚಾರೋಪನ್ಯಾಸ ಮೊದಲಾದ ಪ್ರಶಂಸನೀಯ ಕಾರ್ಯಗಳಿಂದ ‘ಚಂದ್ರಗಂಗ ಜ್ಞಾನಪೀಠ’ ಉತ್ತರ ಕರ್ನಾಟಕದ ಸಾಂಸ್ಕೃತಿಕ ಆಕರ್ಷಣೆಯಾಗಿ ಬೆಳೆಯಿತು. ಆಯುಷ್ಯಪೂರ್ತಿ ಶಿಕ್ಷಣ ಮತ್ತು ಸಾಹಿತ್ಯದ ಕಾಯಕದಲ್ಲಿ ತೊಡಗಿಕೊಂಡಿದ್ದ ಮಿರ್ಜಿ ಅಣ್ಣಾರಾಯರು 1975ರಲ್ಲಿ ಇಹಲೋಕ ತ್ಯಜಿಸಿದರು. ಖಾಸಗಿ ಬದುಕು ಮತ್ತು ಸಾಹಿತ್ಯಗಳೆರಡರಲ್ಲೂ ಆದರ್ಶಪ್ರಾಯರಾಗಿದ್ದ ಮಿರ್ಜಿ ಅಣ್ಣಾರಾಯರ ಜೀವನಗಾಥೆ ಸ್ಮರಣಯೋಗ್ಯವಾದುದು. ಕನ್ನಡ ಸಂಸ್ಕೃತಿಯ ಗತಕಾಲದ ಒಂದು ಮಾದರಿ ಎನ್ನಬಹುದಾದ ಅಣ್ಣಾರಾಯರ ಜನ್ಮ ಶತಾಬ್ದಿ ವರ್ಷವಿದು. ಅವರ ಜನ್ಮ ಶತಾಬ್ದಿ ಆಚರಣೆಯ ಸುದ್ದಿಸೂರು ಏನೂ ಕೇಳಿಬರುತ್ತಿಲ್ಲ. 1935ರಿಂದ 1975ರವರೆಗೆ ಅವರು ಅವಿಚ್ಛಿನ್ನ ಸಂಬಂಧ ಹೊಂದಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗಾಗಲೀ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಲೀ ಮಿರ್ಜಿಯವರ ನೆನಪಾದಂತಿಲ್ಲ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News