​ಗೂಗಲ್ ಕ್ಲೌಡ್ ವ್ಯವಹಾರಕ್ಕೆ ಬೆಂಗಳೂರು ಟೆಕ್ಕಿ ಸಾರಥ್ಯ

Update: 2018-11-18 03:40 GMT

ಸ್ಯಾನ್‌ಫ್ರಾನ್ಸಿಸ್ಕೊ, ನ. 18: ಒರ್ಯಾಕಲ್‌ನ ಕಾರ್ಪ್ ಉತ್ಪನ್ನ ಮುಖ್ಯಸ್ಥರಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಥಾಮಸ್ ಕುರಿಯನ್ ಅವರು ಗೂಗಲ್‌ನ ಕ್ಲೌಡ್ ವ್ಯವಹಾರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಕುರಿಯನ್ ಅಧಿಕಾರ ವಹಿಸಿಕೊಳ್ಳುವರು ಎಂದು ಗೂಗಲ್ ಪ್ರಕಟಿಸಿದೆ.

ಗೂಗಲ್‌ನ ಕ್ಲೌಡ್ ವಿಭಾಗದ ಮುಖ್ಯಸ್ಥರಾಗಿದ್ದ ಡಿಯಾನ್ ಗ್ರೀನ್ ಅವರ ಸ್ಥಾನಕ್ಕೆ ಕುರಿಯನ್ ಆಯ್ಕೆಯಾಗಿದ್ದಾರೆ. ಗೂಗಲ್ ಕ್ಲೌಡ್ ವ್ಯವಹಾರ ಕಳೆದ ವರ್ಷ ಅಮೆಝಾನ್ ಮತ್ತು ಮೈಕ್ರೊ ಸಾಫ್ಟ್‌ಗಿಂತ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಕುರಿಯನ್ ಮುಂದೆ ದೊಡ್ಡ ಸವಾಲು ಇದೆ.

ಒರ್ಯಾಕಲ್‌ನಲ್ಲಿ 22 ವರ್ಷ ಸೇವೆ ಸಲ್ಲಿಸಿದ ಕುರಿಯನ್, ಸಂಸ್ಥೆಯ ಸಂಸ್ಥಾಪಕ ಲಾರ್ರಿ ಎಲ್ಲಿಸನ್ ಅವರ ಆಪ್ತ ವಲಯದಲ್ಲಿದ್ದರು. ಕ್ಲೌಡ್ ವ್ಯವಹಾರವನ್ನು ವಿಸ್ತರಿಸುವಲ್ಲಿ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.

ಗೂಗಲ್ ಕ್ಲೌಡ್‌ನ ಸಿಇಒ ಆಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗ್ರೀನ್, ಸುಲಲಿತವಾಗಿ ಜವಾಬ್ದಾರಿ ವರ್ಗಾವಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನವರಿವರೆಗೂ ತಮ್ಮ ಹುದ್ದೆಯಲ್ಲಿ ಕುರಿಯನ್ ಜತೆ ಮುಂದುವರಿಯುವರು. ಬಳಿಕ ಗೂಗಲ್‌ನ ಮಾತೃ ಸಂಸ್ಥೆಯಾದ ಆಲ್ಫಬಿಟ್ ನಿರ್ದೇಶಕರಾಗಿ ಮುಂದುವರಿಯುವರು.

ಕ್ಲೌಡ್ ವ್ಯವಹಾರ ತೀರಾ ಸ್ಪರ್ಧಾತ್ಮಕವಾಗಿರುವ ಹಿನ್ನೆಲೆಯಲ್ಲಿ ಒರ್ಯಾಕಲ್ ಕಾರ್ಯನಿರ್ವಾಹಕ ಅಧ್ಯಕ್ಷ ಲಾರ್ರಿ ಎಲ್ಲಿಸರ್ ಜತೆಗಿನ ವೈಮನಸ್ಸಿಂದ ಕುರಿಯನ್ ರಾಜೀನಾಮೆ ನೀಡಿದ್ದರು. ನವೆಂಬರ್ 26ರಂದು ಕುರಿಯನ್ ಗೂಗಲ್ ಕ್ಲೌಡ್ ಸೇರಲಿದ್ದು, 2019ರ ಆರಂಭದಿಂದ ಕ್ಲೌಡ್ ಮುಖ್ಯಸ್ಥರಾಗುವರು ಎಂದು ಗ್ರೀನ್ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News