ಅಮೆರಿಕ: 16ರ ಬಾಲಕನಿಂದ ತೆಲಂಗಾಣ ವ್ಯಕ್ತಿಯ ಹತ್ಯೆ

Update: 2018-11-18 03:48 GMT

ಹೈದರಾಬಾದ್, ನ. 18: ಹದಿನಾರರ ಬಾಲಕನೋರ್ವ ತೆಲಂಗಾಣ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಿ ಕಾರು ಅಪಹರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೂಲತಃ ತೆಲಂಗಾಣದ ಮೇಡಕ್ ಜಿಲ್ಲೆಯ ಸುನೀಲ್ ಎಡ್ಲಾ (61), ಅಮೆರಿಕದ ಅಟ್ಲಾಂಟಿಕ್ ಸಿಟಿಯ ಹೋಟೆಲ್ ಒಂದರಲ್ಲಿ ಲೆಕ್ಕಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಅವರು ನ್ಯೂಜೆರ್ಸಿಯ ತಮ್ಮ ಮನೆಯಿಂದ ರಾತ್ರಿ ಕೆಲಸಕ್ಕೆ ಹೊರಟಾಗ ಈ ಘಟನೆ ನಡೆದಿದೆ. ಬಾಲಕ ಸುನೀಲ್ ಮೇಲೆ ಗುಂಡಿನ ದಾಳಿ ನಡೆಸಿ ಕಾರಿನೊಂದಿಗೆ ಪರಾರಿಯಾದ. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಸುನೀಲ್ ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರು ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನ ವಿರುದ್ಧ ಕೊಲೆ, ದರೋಡೆ, ಕಾರು ಅಪಹರಣ ಮತ್ತು ಕಾನೂನುಬಾಹಿರವಾಗಿ ಪಿಸ್ತೂಲು ಹೊಂದಿದ್ದ ಆರೋಪ ಹೊರಿಸಲಾಗಿದೆ.

1987ರಿಂದ ಅಮೆರಿಕದಲ್ಲಿ ವಾಸವಿರುವ ಎಡ್ಲಾ, ತಮ್ಮ ತಾಯಿಯ 95ನೇ ಹುಟ್ಟುಹಬ್ಬ ಮತ್ತು ಕ್ರಿಸ್‌ಮಸ್ ಆಚರಣೆಗಾಗಿ ಎರಡು ತಿಂಗಳು ರಜೆ ಮೇಲೆ ಈ ತಿಂಗಳ ಕೊನೆಗೆ ಹುಟ್ಟೂರಿಗೆ ಬರಲು ಸಿದ್ಧತೆ ಮಾಡಿಕೊಂಡಿದ್ದರು. ಸಮುದಾಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸುನೀಲ್, ಅಟ್ಲಾಂಟಿಕ್ ಸಿಟಿ ಚರ್ಚ್‌ನಲ್ಲಿ ಜನಪ್ರಿಯ ಪಿಯಾನೊ ವಾದಕರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News