ಸಿಬಿಐ ನಕಲಿ ಎನ್‍ಕೌಂಟರ್ ಆರೋಪಿಗಳ ಪರ ಕೆಲಸ ಮಾಡುತ್ತಿದೆ : ಸೊಹ್ರಾಬುದ್ದೀನ್ ಸಹೋದರ ಆರೋಪ

Update: 2018-11-18 08:45 GMT

ಹೊಸದಿಲ್ಲಿ,ನ.18: ಸೊಹ್ರಾಬುದ್ದೀನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಸಿಬಿಐ, ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಸೊಹ್ರಬುದ್ದೀನ್ ತಮ್ಮ ರುಬಾಬುದ್ದೀನ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸದ ಸಿಬಿಐ, ಕಾರ್ಯವೈಖರಿಯನ್ನು ಗಮನಿಸಿದರೆ ಅದು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ನ್ಯಾಯಾಧೀಶ ಜೆ.ಎಸ್.ಶರ್ಮಾ ಮುಂದೆ ಅರ್ಜಿ ಸಲ್ಲಿಸಿರುವ ಅವರು, ಆರಂಭಿಕ ಹಂತದಲ್ಲಿ ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದ ರಜನೀಶ್ ರಾಯ್ ಅವರಿಗೆ ಸಮನ್ಸ್ ನೀಡುವಂತೆ ಕೋರಿದ್ದಾರೆ. ಜತೆಗೆ ಈ ಪ್ರಕರಣದಲ್ಲಿ, ಅಹ್ಮದಾಬಾದ್‍ನ ಬಿಲ್ಡರ್‍ಗಳಾದ ಸೊಹ್ರಬುದ್ದೀನ್ ಅವರ ತಮ್ಮ ಶಹಾನವಾಜುದ್ದೀನ್, ರಮಣ್ ಮತ್ತು ದರ್ಶತ್ ಪಟೇಲ್ ಅವರನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಬಿಳಿ ಕುರ್ತಾ ಪೈಜಾಮಾ ಧರಿಸಿ ಆಗಮಿಸಿದ ಅವರು, ಸಹೋದರನ ಎನ್‍ಕೌಂಟರ್ ನಡೆದ ಬಗ್ಗೆ ಹಿಂದಿಯಲ್ಲಿ ವಿವರ ನೀಡಿದರು. ಅತ್ತಿಗೆ ಕೌಸರ್ ಬೀ ಏನಾಗಿದ್ದಾರೆ ಎನ್ನುವುದು ಇನ್ನೂ ನಿಗೂಢ ಎಂದು ಹೇಳಿದರು.

2005ರ ನವೆಂಬರ್ 16ರಂದು ನಜಾಮುದ್ದೀನ್, ಸೊಹ್ರಾಬುದ್ದೀನ್ ಹಾಗೂ ಕೌಸರ್ ಬೀ ಇಂದೋರ್ ಬಳಿಯ ತಮ್ಮ ಗ್ರಾಮವಾದ ಝಿರ್ನಿಯಾಗೆ ತೆರಳಿದ್ದರು. ಬಳಿಕ ಹೈದರಾಬಾದ್‍ಗೆ ಹೋಗಿದ್ದರು. ತುಳಸೀರಾಂ ಪ್ರಜಾಪತಿ ಕೂಡಾ ಅವರ ಜತೆ ಹೋಗಿದ್ದ ಎನ್ನಲಾಗಿದೆ. ಈದ್ ಸಂದರ್ಭದಲ್ಲಿ ಕಲಾಮುದ್ದೀನ್ ಅವರನ್ನು ಭೇಟಿ ಮಾಡಲು ಎಲ್ಲರೂ ತೆರಳಿದ್ದರು ಎಂದು ತಿಳಿಸಿದರು.

2005ರ ನವೆಂವರ್ 22ರಂದು ತಮ್ಮ ನಜೀಮುದ್ದೀನ್‍ಗೆ ಕರೆ ಮಾಡಿ ಕೇಳಿದಾಗ ಸೊಹ್ರಾಬುದ್ದೀನ್ ಹಾಗೂ ಕೌಸರ್ ಬೀ ಸಾಂಗ್ಲಿಯಲ್ಲಿದ್ದಾರೆ ಎಂದು ಹೇಳಿದ್ದ. ಮರುದಿನ ಕರೆ ಮಾಡಿದಾಗ ಬೇರೆ ಯಾರೋ ಸ್ವೀಕರಿಸಿದರು. ನವೆಂಬರ್ 25ರಿಂದ ಫೋನ್ ವ್ಯಾಪ್ತಿ ಪ್ರದೇಶದಲ್ಲಿಲ್ಲ ಎಂದು ಬರುತ್ತಿತ್ತು. ನವೆಂಬರ್ 26ರಂದು ಸೊಹ್ರಬುದ್ದೀನ್‍ನನ್ನು ನಕಲಿ ಎನ್‍ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂಬ ವಿಷಯ ತಿಳಿಯಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News