ಆಸ್ಟ್ರೇಲಿಯ ವಿರುದ್ಧ ‘ಡೆಡ್‌ಬಾಲ್’ ಎಸೆದು ಕಕ್ಕಾಬಿಕ್ಕಿಯಾದ ರಬಾಡ

Update: 2018-11-18 09:07 GMT

ಗೋಲ್ಡ್‌ಕೋಸ್ಟ್, ನ.18: ಶಿಸ್ತುಬದ್ಧ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಅಚ್ಚರಿಗೊಳಿಸುತ್ತಿದ್ದ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡ ಆಸ್ಟ್ರೇಲಿಯ ವಿರುದ್ಧ ಶನಿವಾರ ನಡೆದ ಏಕೈಕ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ತನ್ನದೇ ಬೌಲಿಂಗ್‌ನಿಂದ ಒಂದು ಕ್ಷಣ ಕಕ್ಕಾಬಿಕ್ಕಿಯಾದ ಪ್ರಸಂಗ ನಡೆಯಿತು.

ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಪಂದ್ಯದ 9ನೇ ಓವರ್‌ನಲ್ಲಿ ರಬಾಡ ಚೆಂಡನ್ನು ಎಸೆಯುವ ಪ್ರಯತ್ನದಲ್ಲಿದ್ದಾಗ ಹಿಡಿತಕ್ಕೆ ಸಿಗದ ಚೆಂಡು ಕೈಯಿಂದ ಜಾರಿ ಹೋಯಿತು. ಚೆಂಡು ಕೈಯಿಂದ ಜಾರಿದಾಗ ಸ್ವತಃ ರಬಾಡಕ್ಕೆ ಅಚ್ಚರಿಯಾಯಿತು. ಎದುರಾಳಿ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಬೌಲರ್ ರಬಾಡ ಕೈಯಿಂದ ಜಾರಿದ ಚೆಂಡು ತನ್ನತ್ತ ಬಾರದೆ ಮೈದಾನದ ಬೇರೆಡೆಗೆ ಹೋಗಿದ್ದನ್ನು ನೋಡಿ ನಸುನಕ್ಕರು.

ರಬಾಡ ಕೈಯಿಂದ ಜಾರಿದ ಚೆಂಡನ್ನು ಅಂಪೈರ್‌ಗಳು ಡೆಡ್ ಬಾಲ್ ಎಂದು ಪರಿಗಣಿಸಿ ಬೌಲಿಂಗ್ ಮುಂದುವರಿಸುವಂತೆ ಸೂಚಿಸಿದರು. ಆಸೀಸ್ ವಿರುದ್ಧ 2 ಓವರ್ ಬೌಲಿಂಗ್ ಮಾಡಿದ್ದ ರಬಾಡ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ.

ಮಳೆಬಾಧಿತವಾಗಿ 10 ಓವರ್‌ಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ಕ್ರಿಸ್ ಮೊರಿಸ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. 23ರ ಹರೆಯದ ರಬಾಡ ಸೀಮಿತ ಓವರ್ ಕ್ರಿಕೆಟ್‌ನಲ್ಲಿ 46ನೇ ರ್ಯಾಂಕಿನಲ್ಲಿದ್ದಾರೆ. ಟಿ-20ಯಲ್ಲಿ 24 ವಿಕೆಟ್‌ಗಳನ್ನು ಪಡೆದಿರುವ ರಬಾಡ 30ಕ್ಕೆ 3 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ. ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ರಬಾಡ ಏಕದಿನದಲ್ಲಿ 4ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News