ಅಸ್ಸಾಂ ಎನ್‌ಆರ್‌ಸಿ: ಅನರ್ಹ 40 ಲಕ್ಷ ಜನರ ಪೈಕಿ ಇದುವರೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ 3.5 ಲಕ್ಷ ಮಾತ್ರ

Update: 2018-11-18 14:38 GMT

ಗುವಾಹತಿ, ನ. 18: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರತಿಪಾದನೆ ಹಾಗೂ ಆಕ್ಷೇಪಕ್ಕೆ ಅವಕಾಶ ತೆರೆದ ಎರಡು ತಿಂಗಳ ಬಳಿಕ ರಾಷ್ಟ್ರೀಯ ಪೌರ ನೋಂದಣಿ ಕರಡಿನಲ್ಲಿ ಒಳಗೊಳ್ಳದ ಒಟ್ಟು 40 ಲಕ್ಷ ಜನರಲ್ಲಿ 3.5 ಲಕ್ಷ ಜನರು ತಾವು ಭಾರತೀಯ ಪ್ರಜೆಗಳು ಎಂದು ಪ್ರತಿಪಾದಿಸಿದ್ದಾರೆ.

ಅಸ್ಸಾಂ ನಿವಾಸಿಗಳ ಪಟ್ಟಿಯಾದ ರಾಷ್ಟ್ರೀಯ ಪೌರ ನೋಂದಣಿಯಲ್ಲಿ ಶಂಕಿತ ಅಕ್ರಮ ವಲಸಿಗರನ್ನು ಸೇರಿಸಿರುವುದನ್ನು ಪ್ರಶ್ನಿಸಿ ಆಡಳಿತ 100ಕ್ಕೂ ಅಧಿಕ ಮನವಿಯನ್ನು ಸ್ವೀಕರಿಸಿದೆ. ರಾಷ್ಟ್ರೀಯ ಪೌರ ನೋಂದಣಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ಇದುವರೆಗೆ ಸುಮಾರು 3.5 ಲಕ್ಷ ಅರ್ಜಿಗಳನ್ನು ಸಲ್ಲಿಸಲಾಗಿದೆ ಹಾಗೂ ತಾವು ಭಾರತೀಯ ನಾಗರಿಕರು ಎಂದು ಪ್ರತಿಪಾದಿಸಿದ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಾದನೆ ಹಾಗೂ ಆಕ್ಷೇಪ ಅವಧಿಯಲ್ಲಿ ಕಡಿಮೆ ಮನವಿ ಬಂದ ಬಗ್ಗೆ ಕೂಡ ಹೊಸದಿಲ್ಲಿಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆದಿದೆ.

ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗುಬಾ, ಸಿಬಿಐ ನಿರ್ದೇಶಕ ರಾಜೀವ್ ಜೈನ್ ಹಾಗೂ ಇತರರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಪೌರ ನೋಂದಣಿಯನ್ನು ಪರಿಷ್ಕೃತಗೊಳಿಸಲು ಇರುವ ಪ್ರತಿಪಾದನೆ ಹಾಗೂ ಆಕ್ಷೇಪಗಳನ್ನು ವಿಲೇವಾರಿ ಮಾಡಲು ಗುಣಮಟ್ಟದ ಕಾರ್ಯನಿರ್ವಹಣಾ ಪ್ರಕ್ರಿಯೆ (ಎಸ್‌ಒಪಿ)ಯನ್ನು ಕೂಡ ಸುಪ್ರೀಂ ಕೋರ್ಟ್ ಅಂತಿಮಗೊಳಿಸಿತ್ತು. ರಾಷ್ಟ್ರೀಯ ಪೌರತ್ವ ನೋಂದಣಿ ಕರಡನ್ನು ಜುಲೈ 30ರಂದು ಪ್ರಕಟಿಸಲಾಗಿತ್ತು. ಈ ಕರಡಿನಲ್ಲಿ ಒಟ್ಟು 3.29 ಕೋಟಿ ಅರ್ಜಿಯಲ್ಲಿ 2.9 ಕೋಟಿ ಜನರನ್ನು ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News