2 ದಿನಗಳೊಳಗೆ ಸಮಗ್ರ ವರದಿ ಪ್ರಕಟ: ಟ್ರಂಪ್

Update: 2018-11-18 15:44 GMT

ವಾಶಿಂಗ್ಟನ್,ನ.18: ಸೌದಿ ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆ ಕುರಿತ ಸಮಗ್ರ ವರದಿಯೊಂದನ್ನು ಎರಡು ದಿನಗಳೊಳಗೆ ಪ್ರಕಟಿಸಲಾಗುವುದೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ತಿಳಿಸಿದ್ದಾರೆ. ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶಿಸಿದ್ದರೆಂದು ಅಮೆರಿಕದ ಬೇಹುಗಾರ ಸಂಸ್ಥೆ ಸಿಐಎ ತನಿಖೆಯಿಂದ ಪತ್ತೆಹಚ್ಚಿರುವ ಹಿನ್ನೆಲೆಯಲ್ಲಿ ತಾನು ಸಿಐಎ ನಿರ್ದೇಶಕಿ ಜಿನಾ ಹ್ಯಾಸ್ಪೆಲ್ ಜೊತೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಸಂಪೂರ್ಣವಾದ ವರದಿಯೊಂದನ್ನು ಮಂಗಳವಾರದೊಳಗೆ ಸಲ್ಲಿಸಲಾಗುವುದೆಂದು ಟ್ರಂಪ್ ತಿಳಿಸಿದ್ದಾರೆ.

ವಿವಿಧ ಗುಪ್ತಚರ ಮೂಲಗಳ ವರದಿಯನ್ನು ಆಧರಿಸಿ, ಖಶೋಗಿ ಹತ್ಯೆಯಲ್ಲಿ ಸೌದಿ ಯುವರಾಜ ಸಲ್ಮಾನ್ ಅವರ ಪಾತ್ರವಿರುವುದನ್ನು ಸಿಐಎ ದೃಢಪಡಿಸಿದೆಯೆಂದು ವಾಶಿಂಗ್ಟನ್ ಪೋಸ್ಟ್ ಶುಕ್ರವಾರ ವರದಿ ಮಾಡಿತ್ತು.

ಕಾಡ್ಗಿಚ್ಚಿನಿಂದ ಅಪಾರ ಹಾನಿಯಾಗಿರುವ ಕ್ಯಾಲಿಫೋರ್ನಿಯಾ ರಾಜ್ಯಕ್ಕೆ ವಿಮಾನಯಾನ ಕೈಗೊಂಡಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಜಿನಾ ಹ್ಯಾಸ್ಪೆಲ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಜೊತೆ ಮಾತುಕತೆ ನಡೆಸಿದ್ದಾರೆಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್, ಏರ್‌ಫೋರ್ಸ್ ಓನ್ ವಿಮಾನದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ಕಾಡ್ಗಿಚ್ಚು ಪೀಡಿತ ಮಾಲಿಬು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್ ಅವರು ತಾನು ಸಿಐಎ ನಿರ್ದೇಶಕಿ ಹ್ಯಾಸ್ಪೆಲ್ ಜೊತೆ ಮಾತನಾಡಿದ್ದು, ಮಂಗಳವಾರದೊಳಗೆ ಸಮಗ್ರ ವರದಿಯನ್ನು ಪ್ರಕಟಿಸಲಾಗುವುದು ಎಂದರು. ಈ ಕೃತ್ಯಕ್ಕೆ .ಯಾರು ಕಾರಣರು ಹಾಗೂ ಅದನ್ನು ಯಾರು ಎಸಗಿದರು ಎಂಬ ಬಗ್ಗೆ ನಾವು ಸಂಪೂರ್ಣ ಪರಾಮರ್ಶೆ ನಡೆಸಲಿದ್ದೇವೆ ಎಂದವರು ಹೇಳಿದರು. ಸೌದಿ ಪತ್ರಕರ್ತ ಜಮಾಲ್ ಖಶೋಗಿ , ತನ್ನ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲು ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News