ಭಾರತದ ಸ್ಪಿನ್ ಮೋಡಿಗೆ ಶರಣಾದ ಆಸ್ಟ್ರೇಲಿಯ

Update: 2018-11-18 18:12 GMT

ಗಯಾನ, ನ.18: ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನಾ ಜೀವನಶ್ರೇಷ್ಠ ಇನಿಂಗ್ಸ್(83) ಹಾಗೂ ಸ್ಪಿನ್ನರ್‌ಗಳ ಸಂಘಟಿತ ಪ್ರದರ್ಶನದ ಸಹಾಯದಿಂದ ಭಾರತದ ಮಹಿಳಾ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ 48 ರನ್‌ಗಳ ಗೆಲುವು ದಾಖಲಿಸಿದೆ. ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. 55 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳ ಸಹಿತ 83 ರನ್ ಗಳಿಸಿದ ಮಂಧಾನ ನಾಯಕಿ ಹರ್ಮನ್‌ಪ್ರೀತ್ ಕೌರ್(43 ರನ್, 27 ಎಸೆತ)ಅವರೊಂದಿಗೆ 3ನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿ ತಂಡ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.

ಭಾರತದ ಪರ ಸ್ಮತಿ ಮಂಧಾನ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ವೇಗವಾಗಿ 1,000 ರನ್ ಪೂರೈಸಿದ ಸಾಧನೆ ಮಾಡಿದರು.

ಗೆಲ್ಲಲು 168 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯಕ್ಕೆ ಭಾರತದ ಸ್ಪಿನ್ನರ್‌ಗಳಾದ ಅನುಜಾ ಪಾಟೀಲ್(3-15), ಪೂನಂ ಯಾದವ್(2-28) ಹಾಗೂ ರಾಧಾ ಯಾದವ್(2-13)ಸವಾಲಾಗಿ ಪರಿಣಮಿಸಿದರು. ಈ ಮೂವರು ಸ್ಪಿನ್ನರ್‌ಗಳು ತಮ್ಮಿಳಗೆ 7 ವಿಕೆಟ್‌ಗಳನ್ನು ಹಂಚಿಕೊಂಡು ಆಸ್ಟ್ರೇಲಿಯವನ್ನು 19.4 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 119 ರನ್‌ಗೆ ನಿಯಂತ್ರಿಸಲು ಯಶಸ್ವಿಯಾದರು.

ಭಾರತದ ಇನಿಂಗ್ಸ್ ವೇಳೆ ಸಹ ಆಟಗಾರ್ತಿ ಮೆಗಾನ್ ಸ್ಚಟ್‌ಗೆ ಢಿಕ್ಕಿ ಹೊಡೆದು ಗಾಯವಾಗಿದ್ದ ಅಲಿಸ್ಸಾ ಹೀಲಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಹೀಲಿ ಅನುಪಸ್ಥಿತಿಯಲ್ಲಿ ಬೆಥ್ ಮೂನಿ(19) ಹಾಗೂ ಎಲಿಸ್ ವಿಲ್ಲಾನಿ(6) ಇನಿಂಗ್ಸ್ ಆರಂಭಿಸಿದರು. ಮೊದಲ 4 ಓವರ್‌ಗಳಲ್ಲಿ 27 ರನ್ ಗಳಿಸಿ ಸಾಧಾರಣ ಆರಂಭ ನೀಡಿದರು. ದೀಪ್ತಿ ಸತತ ಎರಡು ಎಸೆತಗಳಲ್ಲಿ ಆಸೀಸ್‌ನ ಇಬ್ಬರೂ ಆಟಗಾರ್ತಿಯರನ್ನು ಪೆವಿಲಿಯನ್‌ಗೆ ಅಟ್ಟಿದರು. ಆಗ ಆಸ್ಟ್ರೇಲಿಯದ ಸ್ಕೋರ್ 2ಕ್ಕೆ27.

ಕೆಲವು ಓವರ್‌ಗಳ ಬಳಿಕ ನಾಯಕಿ ಮೆಗ್ ಲ್ಯಾನ್ನಿಂಗ್ಸ್(10)ರಾಧಾ ಯಾದವ್ ಬೌಲಿಂಗ್‌ನಲ್ಲಿ ವೇದಾಗೆ ಕ್ಯಾಚ್ ನೀಡಿದರು. ಎಲ್ಲಿಸ್ ಪೆರ್ರಿ 28 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ ಗಳಿಸಿದ್ದರೂ ಆಸ್ಟ್ರೇಲಿಯ ನಿರಂತರ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಆಸ್ಟ್ರೇಲಿಯ ವಿರುದ್ಧ ಗೆಲುವಿನೊಂದಿಗೆ ಭಾರತ ‘ಬಿ’ ಗುಂಪಿನಲ್ಲಿ ಸತತ 4ನೇ ಗೆಲುವು ಸಾಧಿಸಿದೆ. ಭಾರತ ಎರಡನೇ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ಅಥವಾ ಆತಿಥೇಯ ವಿಂಡೀಸ್ ತಂಡವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಮೊದಲ ಮೂರು ಪಂದ್ಯಗಳನ್ನು ಜಯಿಸಿರುವ ಭಾರತ ಹಾಗೂ ಆಸ್ಟ್ರೇಲಿಯ ಈಗಾಗಲೇ ಸೆಮಿ ಫೈನಲ್ ಸ್ಥಾನವನ್ನು ದೃಢಪಡಿಸಿಕೊಂಡಿವೆ.

ಸಂಕ್ಷಿಪ್ತ ಸ್ಕೋರ್

<ಭಾರತ: 20 ಓವರ್‌ಗಳಲ್ಲಿ 167/8

(ಸ್ಮತಿ ಮಂಧಾನ 83, ಹರ್ಮನ್‌ಪ್ರೀತ್ ಕೌರ್ 43, ಪೆರ್ರಿ 3-16, ಗಾರ್ಡ್‌ನರ್ 2-25, ಕಿಮನ್ಸ್ 2-42)

<ಆಸ್ಟ್ರೇಲಿಯ: 19.4 ಓವರ್‌ಗಳಲ್ಲಿ 119/9

(ಪೆರ್ರಿ ಔಟಾಗದೆ 39, ಗಾರ್ಡ್‌ನರ್ 20, ಮೂನಿ 19,ಅನುಜಾ ಪಾಟೀಲ್ 3-15, ರಾಧಾ ಯಾದವ್ 2-13, ದೀಪ್ತಿ ಶರ್ಮಾ 2-24, ಪೂನಂ ಯಾದವ್ 2-28)

<ಪಂದ್ಯಶ್ರೇಷ್ಠ: ಸ್ಮತಿ ಮಂಧಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News