ಲಂಕಾ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಇಂಗ್ಲೆಂಡ್

Update: 2018-11-18 18:15 GMT

ಕ್ಯಾಂಡಿ, ನ.18: ಜಾಕ್ ಲೀಚ್ ಕಬಳಿಸಿದ ಐದು ವಿಕೆಟ್ ಗೊಂಚಲು ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ 17 ವರ್ಷಗಳ ಬಳಿಕ ದ್ವೀಪರಾಷ್ಟ್ರದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. 5ನೇ ದಿನವಾದ ರವಿವಾರ ಕೇವಲ 30 ನಿಮಿಷಗಳಲ್ಲಿ ಶ್ರೀಲಂಕಾದ ಕೊನೆಯ 3 ವಿಕೆಟ್‌ಗಳನ್ನು ಉರುಳಿಸಿದ ಇಂಗ್ಲೆಂಡ್ 57 ರನ್‌ಗಳ ಅಂತರದಿಂದ ಜಯ ಸಾಧಿಸಿತು. ಮಲಿಂದ ಪುಷ್ಪಕುಮಾರ್ ವಿಕೆಟ್‌ನ್ನು ಉರುಳಿಸಿದ ಲೀಚ್ ಶ್ರೀಲಂಕಾ ಇನಿಂಗ್ಸ್‌ಗೆ ತೆರೆ ಎಳೆದರು.

ಶ್ರೀಲಂಕಾ ತಂಡಕ್ಕೆ 2ನೇ ಪಂದ್ಯವನ್ನು ಗೆಲ್ಲಲು 2ನೇ ಇನಿಂಗ್ಸ್‌ನಲ್ಲಿ 301 ರನ್ ಗಳಿಸುವ ಅಗತ್ಯವಿತ್ತು. ಆದರೆ, ಅದು ಕೇವಲ 243 ರನ್ ಗಳಿಸಲಷ್ಟೇ ಶಕ್ತವಾಯಿತು. ರವಿವಾರ 7 ವಿಕೆಟ್‌ಗಳ ನಷ್ಟಕ್ಕೆ 226 ರನ್‌ನಿಂದ 2ನೇ ಇನಿಂಗ್ಸ್ ಮಂಂದುವರಿಸಿದ ಶ್ರೀಲಂಕಾಕ್ಕೆ ಗೆಲ್ಲಲು 3 ವಿಕೆಟ್ ನೆರವಿನಿಂದ 75 ರನ್ ಗಳಿಸಬೇಕಾಗಿತ್ತು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ನಿರೊಶನ್ ಡಿಕ್ವೆಲ್ಲಾ 35 ರನ್‌ಗೆ ಅಲಿಗೆ ವಿಕೆಟ್ ಒಪ್ಪಿಸುವುದರೊಂದಿಗೆ ಲಂಕಾದ ಗೆಲುವಿನ ಕನಸು ಭಗ್ನಗೊಂಡಿತು. ಅಖಿಲ ಧನಂಜಯ ಅಜೇಯ 8 ರನ್ ಗಳಿಸಿದರು.

ಇಂಗ್ಲೆಂಡ್ 2015-16ರಲ್ಲಿ ದಕ್ಷಿಣ ಆಫ್ರಿಕವನ್ನು ಮಣಿಸಿದ ಬಳಿಕ ಮೊದಲ ಬಾರಿ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. 2001ರ ಬಳಿಕ ಶ್ರೀಲಂಕಾ ನೆಲದಲ್ಲಿ ಮೊದಲ ಸರಣಿ ಜಯಿಸಿದೆ.

 ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸಿದ್ದ ಜೋ ರೂಟ್ ಬಳಗ ಇದೀಗ 2ನೇ ಪಂದ್ಯವನ್ನು ಜಯಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. 2ನೇ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಲೀಚ್, ಮೊಯಿನ್ ಅಲಿ ಹಾಗೂ ಆದಿಲ್ ರಶೀದ್ ಶ್ರೀಲಂಕಾದ 20 ವಿಕೆಟ್‌ಗಳ ಪೈಕಿ 18 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು. ನಾಯಕ ರೂಟ್ 2ನೇ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ 124 ರನ್ ಗಳಿಸಿದ್ದಾರೆ. ಲೀಚ್ 83 ರನ್‌ಗೆ 5 ವಿಕೆಟ್‌ಗಳನ್ನು ಪಡೆದರೆ, ಅಲಿ 72 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಉಭಯ ತಂಡಗಳು ಶುಕ್ರವಾರದಿಂದ ಕೊಲಂಬೊದಲ್ಲಿ ಮೂರನೇ ಟೆಸ್ಟ್ ಪಂದ್ಯವನ್ನು ಆಡಲಿವೆ.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್ ಮೊದಲ ಇನಿಂಗ್ಸ್: 290

►ಶ್ರೀಲಂಕಾ ಮೊದಲ ಇನಿಂಗ್ಸ್: 336

►ಇಂಗ್ಲೆಂಡ್ ಎರಡನೇ ಇನಿಂಗ್ಸ್: 346/10

 (ರೂಟ್ 124, ಫೋಕ್ಸ್ ಔಟಾಗದೆ 65, ಬರ್ನ್ಸ್59, ಧನಂಜಯ 6-115, ಪೆರೇರ 3-96)

►ಶ್ರೀಲಂಕಾ 2ನೇ ಇನಿಂಗ್ಸ್: 243/10

(ಮ್ಯಾಥ್ಯೂಸ್ 88, ಕರುಣರತ್ನೆ 57,ರೋಶನ್ ಸಿಲ್ವಾ 37, ಡಿಕ್ವೆಲ್ಲಾ 35, ಲೀಚ್ 5-83, ಅಲಿ 4-72)

►ಪಂದ್ಯಶ್ರೇಷ್ಠ: ಜೋ ರೂಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News