ರಾಜಸ್ಥಾನದ ವಿವಾದಿತ ಶಾಸಕ ಅಹುಜಾ ಬಿಜೆಪಿಗೆ ಗುಡ್‌ಬೈ

Update: 2018-11-19 05:34 GMT

ಜೈಪುರ, ನ.19: ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಪಕ್ಷದ ಸರ್ವಾಧಿಕಾರಿ ಧೋರಣೆ ಖಂಡಿಸಿ ರಾಜೀನಾಮೆ ನೀಡಿದ್ದಾರೆ.

ಅಹುಜಾಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ವರ್ ಜಿಲ್ಲೆಯ ರಾಮಗಢ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ಹೀಗಾಗಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಬಿಜೆಪಿ ಅಹುಜಾ ಬದಲಿಗೆ ರಾಮಗಢ ಕ್ಷೇತ್ರದಿಂದ ಸುಖ್ವಂತ್ ಸಿಂಗ್‌ರನ್ನು ಕಣಕ್ಕಿಳಿಸಿದೆ.

‘‘ಬಿಜೆಪಿಯ ಸರ್ವಾಧಿಕಾರಿ ಧೋರಣೆ ಖಂಡಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ರಾಮಜನ್ಮಭೂಮಿ, ಗೋ ರಕ್ಷಣೆ ಹಾಗೂ ಹಿಂದೂತ್ವ ವಿಷಯವನ್ನು ಮುಂದಿಟ್ಟುಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’’ ಎಂದು ಅಹುಜಾ ಹೇಳಿದ್ದಾರೆ.

ಅಹುಜಾ 2016ರ ಫೆಬ್ರವರಿಯಲ್ಲಿ ನೀಡಿದ ಹೇಳಿಕೆ ವಿವಾದವನ್ನು ಎಬ್ಬಿಸಿತ್ತು. ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಕ್ಯಾಂಪಸ್‌ನಲ್ಲಿ 50,000 ಮೂಳೆಗಳ ತುಂಡುಗಳು, 3,000 ಬಳಸಲ್ಪಟ್ಟ ಕಾಂಡೋಮ್‌ಗಳು, 500 ಅಬಾರ್ಶನ್ ಇಂಜೆಕ್ಷನ್‌ಗಳು, 10,000 ಸಿಗರೇಟ್‌ಗಳ ತುಂಡುಗಳು ಪ್ರತಿದಿನ ಪತ್ತೆಯಾಗುತ್ತಿವೆ. ಯುವಕ, ಯುವತಿಯರು ನಗ್ನರಾಗಿ ನೃತ್ಯ ಮಾಡುತ್ತಾರೆ ಎಂದು ಅಹುಜಾ ಹೇಳಿಕೆ ನೀಡಿದ್ದರು.

ಅಲ್ವರ್‌ನಲ್ಲಿ 2017ರಲ್ಲಿ ಗುಂಪು ಹತ್ಯೆಯಲ್ಲಿ ಪೆಹ್ಲುಖಾನ್ ಎಂಬ ಅಮಾಯಕನ ಹತ್ಯೆಯಾಗಿದ್ದನ್ನು ಸಮರ್ಥಿಸಿಕೊಂಡಿದ್ದ ಅಹುಜಾ,‘‘ ನಾವು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಗೋ ಕಳ್ಳ ಸಾಗಾಟಗಾರನ ಹತ್ಯೆ ಮಾಡುವುದಕ್ಕೆ ನನ್ನ ಬೆಂಬಲವಿದೆ'' ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News