ಗುಜರಾತ್ ದಂಗೆಗಳು: ಝಕಿಯಾ ಜಾಫ್ರಿ ಮೇಲ್ಮನವಿಯ ವಿಚಾರಣೆಯನ್ನು ನ 26ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

Update: 2018-11-19 09:02 GMT

ಹೊಸದಿಲ್ಲಿ,ನ.19 : ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 2002ರ ಗುಜರಾತ್ ಹಿಂಸಾಚಾರ  ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ  ಸಂತ್ರಸ್ತೆ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 26ರ ತನಕ ಮುಂದೂಡಿದೆ.

ಫೆಬ್ರವರಿ 28, 2002ರಂದು ಅಹ್ಮದಾಬಾದ್ ನಗರದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಝಕಿಯಾ ಅವರ ಪತಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸಹಿತ ಕನಿಷ್ಠ 69 ಜನರನ್ನು ಉದ್ರಿಕ್ತ ಗುಂಪೊಂದು ಹತ್ಯೆಗೈದಿತ್ತು.

ಗುಜರಾತ್ ಹೈಕೋಟ್ ತನ್ನ ಅಕ್ಟೋಬರ್ 2017ರ ಆದೇಶದಲ್ಲಿ, ಮೋದಿ ಮತ್ತು 58 ಮಂದಿ ಇತರರಿಗೆ  ಕ್ಲೀನ್ ಚಿಟ್ ನೀಡಿ ಪ್ರಕರಣವನ್ನು ಅಂತ್ಯಗೊಳಿಸಿದ್ದ ವಿಶೇಷ ತನಿಖಾ ತಂಡದ ವರದಿಯನ್ನು ಒಪ್ಪಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಝಕಿಯಾ ಜಾಫ್ರಿ ತಮ್ಮ ಅಪೀಲಿನಲ್ಲಿ ಆರೋಪಿಸಿದಂತೆ ಯಾವುದೇ  ದೊಡ್ಡ ಮಟ್ಟಿನ ಸಂಚಿರಲಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಆದರೆ ಅಪೀಲುದಾರೆ ಝಕಿಯಾ ಜಾಫ್ರಿ  ಮರು ತನಿಖೆ ಕೋರಿ ಮ್ಯಾಜಿಸ್ಟೀರಿಯಲ್ ನ್ಯಾಯಾಲಯ ಇಲ್ಲವೇ ಸುಪ್ರೀಂ ಕೊರ್ಟಿಗೆ ಅಪೀಲು ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತ್ತು.

ನವೆಂಬರ್ 13ರಂದು ಜಸ್ಟಿಸ್ ಎ ಎಂ ಖನ್ವಿಲ್ಕರ್ ಹಾಗೂ ಜಸ್ಟಿಸ್ ದೀಪಕ್ ಗುಪ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಝಕಿಯಾ ಜಾಫ್ರಿ ಅವರ  ಅಪೀಲನ್ನು  ನ್ಯಾಯಾಲಯ ಪರಿಶೀಲಿಸಿರುವುದರಿಂದ ಅದರ ಮೇಲಿನ ವಿಚಾರಣೆಯನ್ನು ನವೆಂಬರ್ 19ರಂದು ನಡೆಸುವುದಾಗಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News