ಮೋದಿ, ಶಾ ಬಗ್ಗೆ ಭಯ ಬೇಡ, ಜಗತ್ತಿನ ಅತ್ಯಂತ ಎತ್ತರದ ಶಿವಾಜಿ ಪ್ರತಿಮೆ ಸ್ಥಾಪಿಸಿ: ಫಡ್ನವಿಸ್‍ಗೆ ಶಿವಸೇನೆ ಸಲಹೆ

Update: 2018-11-19 13:15 GMT

ಮುಂಬೈ,ನ.19 : ಮುಂಬೈ ಕರಾವಳಿಯಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಛತ್ರಪತಿ ಶಿವಾಜಿಯ ಪ್ರತಿಮೆ  ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯಾಗಲಿದೆ ಎಂದು ಘೋಷಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ  ಹೇಳಿರುವ ಶಿವಸೇನೆ,  ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಭಯ ಪಡುವ ಅಗತ್ಯವಿಲ್ಲವೆಂದು ಹೇಳಿದೆ.

ಸರ್ದಾರ್ ಪಟೇಲ್ ಪ್ರತಿಮೆಯೇ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂದೆನಿಸಿಕೊಳ್ಳಲು ಶಿವಾಜಿ ಪ್ರತಿಮೆಯ ಎತ್ತರವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ ಎಂದು ಎನ್‍ಸಿಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆಂದು ಸೇನೆ ಹೇಳಿದೆ.

ಮರಾಠಾ ಸಮುದಾಯಕ್ಕೆ ಮೀಸಲಾತಿ ಘೋಷಿಸಲು ಫಡ್ನವಿಸ್ ತೋರಿದ ಅದೇ ಧೈರ್ಯವನ್ನು ಶಿವಾಜಿ ಪ್ರತಿಮೆಯ ಎತ್ತರ ಘೋಷಿಸುವಲ್ಲಿ ಅವರು ತೋರಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ. ಸರ್ದಾರ್ ಪಟೇಲ್ ಪ್ರತಿಮೆಯೇ ಜಗತ್ತಿನ ಎತ್ತರದ ಪ್ರತಿಮೆಯಾಗಬೇಕೆಂದು ಶಿವಾಜಿ ಪ್ರತಿಮೆಯ ಎತ್ತರವನ್ನು ತಗ್ಗಿಸುವ ಪ್ರಸ್ತಾಪ `ಸಂಕುಚಿತ ಮತ್ತು ವಿಕೃತ ಮನೋಭಾವ'ವನ್ನು ಸೂಚಿಸುತ್ತದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ. ಶಿವಾಜಿ ಪ್ರತಿಮೆ ಸರ್ದಾರ್ ಪ್ರತಿಮೆಗಿಂತ ಎತ್ತರವಾಗಿದ್ದರೆ ಅದು ಸರ್ದಾರ್ ಪ್ರತಿಷ್ಠೆಯನ್ನು ಕುಂದಿಸುವುದಿಲ್ಲ ಎಂದೂ ಬರೆಯಲಾಗಿದೆ.

ಸರ್ದಾರ್ ಪಟೇಲ್ ಪ್ರತಿಮೆ ಈಗಾಗಲೇ ಅನಾವರಣಗೊಂಡರೂ ಶಿವಾಜಿ ಪ್ರತಿಮೆಗೆ ಒಂದೇ ಒಂದು ಇಟ್ಟಿಗೆ ಕೂಡ ಜೋಡಿಸಲಾಗಿಲ್ಲ ಎಂದು ಸಂಪಾದಕೀಯದಲ್ಲಿ ವಿವರಿಸಲಾಗಿದೆ. “ಶಿವಾಜಿ ಪ್ರತಿಮೆ ಅತ್ಯಂತ ಎತ್ತರವಾಗಬೇಕು ಎಲ್ಲಾ ಪಕ್ಷಗಳೂ ಈ ನಿಟ್ಟಿನಲ್ಲಿ ಒಂದಾಗಬೇಕು,'' ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News