ವಿಚಕ್ಷಣ ವರದಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ ಅಲೋಕ್ ವರ್ಮಾ

Update: 2018-11-19 14:22 GMT

ಹೊಸದಿಲ್ಲಿ,ನ.19: ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ವಿಚಕ್ಷಣ ಆಯೋಗವು ನೀಡಿರುವ ತನಿಖಾ ವರದಿಯ ಬಗ್ಗೆ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಈ ಪ್ರಕರಣದ ವಿಚಾರಣೆಯನ್ನು ಮುಂದೂಡುವುದಿಲ್ಲ. ಹಾಗಾಗಿ ತಮ್ಮ ಪ್ರತಿಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ದಾಖಲಿಸಿ ಎಂದು ಶ್ರೇಷ್ಠ ನ್ಯಾಯಾಲಯ ವರ್ಮಾಗೆ ಸೂಚಿಸಿತ್ತು. ತನ್ನ ಹಾಗೂ ರಾಕೇಶ್ ಅಸ್ತಾನಾ ಮಧ್ಯೆ ಉಂಟಾಗಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸರಕಾರ ತನ್ನನ್ನು ಒತ್ತಾಯಪೂರ್ವಕ ರಜೆಯಲ್ಲಿ ಕಳುಹಿಸಿರುವುದನ್ನು ಅಲೋಕ್ ವರ್ಮಾ ಪ್ರಶ್ನಿಸಿದ್ದರು. ವರ್ಮಾ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವಿಚಕ್ಷಣ ವರದಿಯಲ್ಲಿ ಸುಪ್ರೀಂ ಕೋರ್ಟ್ ಕಳೆದ ವಾರ ಕ್ಲೀನ್‌ಚಿಟ್ ನೀಡಿರಲಿಲ್ಲ. ಈ ವರದಿಯು ಕೆಲವು ಆರೋಪಗಳಿಗೆ ಪೂರಕವಾಗಿದೆ, ಕೆಲವು ಆರೋಪಗಳಿಗೆ ಪೂರಕವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಕೇಂದ್ರ ವಿಚಕ್ಷಣ ಆಯೋಗದ ವರದಿಯು ಮಿಶ್ರ ಫಲ ಹೊಂದಿದೆ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು ವರ್ಮಾ ಪರ ವಕೀಲ ಫಾಲಿ ನರಿಮನ್‌ಗೆ ಕಳೆದ ವಾರ ತಿಳಿಸಿದ್ದರು. ಸಿಬಿಐ ತನಿಖೆ ನಡೆಸುತ್ತಿರುವ ಹೈದರಾಬಾದ್ ಮೂಲಕ ಉದ್ಯಮಿಯಿಂದ ಅಲೋಕ್ ವರ್ಮಾ ಲಂಚ ಸ್ವೀಕರಿಸಿದ್ದಾರೆ ಎಂದು ರಾಕೇಶ್ ಅಸ್ತಾನಾ ಸರಕಾರ ಮತ್ತು ವಿಚಕ್ಷಣ ಮುಖಸ್ಥರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. ತನ್ನ ವಿರುದ್ಧದ ಆರೋಪವನ್ನು ಬಲವಾಗಿ ನಿರಾಕರಿಸಿರುವ ವರ್ಮಾ, ಸಿಬಿಐ ವಿಚಾರಣೆಯಿಂದ ಬಿಡುಗಡೆ ಪಡೆಯಲು ಬಯಸಿದ್ದ ಉದ್ಯಮಿಯಿಂದ ರಾಕೇಶ್ ಅಸ್ತಾನಾ ಲಂಚ ಪಡೆದುಕೊಂಡಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News