ಖಶೋಗಿ ಹತ್ಯೆ ಧ್ವನಿಮುದ್ರಿಕೆ ಭಯಾನಕ; ಕೇಳಬಯಸುವುದಿಲ್ಲ: ಟ್ರಂಪ್

Update: 2018-11-19 14:46 GMT

ವಾಶಿಂಗ್ಟನ್, ನ. 19: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಧ್ವನಿಮುದ್ರಿಕೆಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ, ಆದರೆ, ನಾನು ಅದನ್ನು ಆಲಿಸಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಯಾಕೆಂದರೆ ಅದು ಆರ್ತನಾದದ ಧ್ವನಿಮುದ್ರಿಕೆ. ಅದೊಂದು ಭಯಾನಕ ಧ್ವನಿಮುದ್ರಿಕೆ’’ ಎಂದು ‘ಫಾಕ್ಸ್ ನ್ಯೂಸ್ ಸಂಡೇ’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

‘‘ಅದು ಅತ್ಯಂತ ಹಿಂಸಾತ್ಮಕ, ಬರ್ಬರ ಮತ್ತ ಭಯಾನಕವಾಗಿದೆ’’ ಎಂದರು.

ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಅಕ್ಟೋಬರ್ 2ರಂದು ತನ್ನ ಮದುವೆಗಾಗಿ ದಾಖಲೆಪತ್ರಗಳನ್ನು ತರಲು ತೆರಳಿದ್ದ ಖಶೋಗಿ ಮರಳಲಿಲ್ಲ.

ಆದರೆ, ದಾಖಲೆಪತ್ರಗಳನ್ನು ಪಡೆದುಕೊಂಡು ಖಶೋಗಿ ಕೌನ್ಸುಲೇಟ್ ಕಚೇರಿಯಿಂದ ಹೋಗಿದ್ದಾರೆ ಎಂಬುದಾಗಿ ಆರಂಭದಲ್ಲಿ ಸೌದಿ ಅರೇಬಿಯದ ಅಧಿಕಾರಿಗಳು ಹೇಳಿದ್ದರು.

ಕೌನ್ಸುಲೇಟ್‌ನಲ್ಲಿ ಖಶೋಗಿಯ ಕೊಲೆಯಾಗಿದೆ ಎಂಬ ಸುದ್ದಿ ಟರ್ಕಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಈ ಸುದ್ದಿಗಳನ್ನೂ ಸೌದಿ ಅರೇಬಿಯ ನಿರಾಕರಿಸಿತು.

ಪತ್ರಿಕೆಗಳಲ್ಲಿ ಹತ್ಯೆಯ ಕುರಿತ ವಿವರಗಳು ಒಂದೊಂದಾಗಿ ಹೊರಬರುತ್ತಿದ್ದಂತೆ, ಅಂತಾರಾಷ್ಟ್ರೀಯ ಒತ್ತಡಕ್ಕೊಳಗಾದ ಸೌದಿ ಅರೇಬಿಯ ಖಶೋಗಿ ಹತ್ಯೆಯನ್ನು ಒಪ್ಪಿಕೊಂಡಿತು.

ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆದೇಶದಂತೆ ಸೌದಿ ಭಿನ್ನಮತೀಯನ ಹತ್ಯೆಯಾಗಿದೆ ಎಂಬ ನಿರ್ಧಾರಕ್ಕೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಂದಿರುವ ಹೊರತಾಗಿಯೂ, ಹತ್ಯೆಯ ಹೊಣೆಯನ್ನು ಅವರ ಮೇಲೆ ಹೊರಿಸಲು ಟ್ರಂಪ್ ಬಯಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News