ಉಪ್ಪಿನ ಸತ್ಯಾಗ್ರಹ ಸ್ಮಾರಕ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ

Update: 2018-11-19 15:17 GMT

ಹೊಸದಿಲ್ಲಿ, ನ.19: ಗುಜರಾತ್‌ನ ದಂಡಿಯಲ್ಲಿ ನಿರ್ಮಿಸಲಾಗುತ್ತಿರುವ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆ(ಸಿಪಿಡಬ್ಲ್ಯೂಡಿ) ತನ್ನ ಅಧಿಕಾರಿಗಳಿಗೆ ಸೂಚಿಸಿದೆ.

ಅಲ್ಲದೆ, ಕಾಮಗಾರಿ ತಡೆಯಿಲ್ಲದೆ ಮುಂದುವರಿಯುವ ನಿಟ್ಟಿನಲ್ಲಿ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಸಿಪಿಡಬ್ಲೂಡಿ ಪ್ರಧಾನ ನಿರ್ದೇಶಕ ಪ್ರಭಾಕರ್ ಸಿಂಗ್ ಕೇಂದ್ರ ಸಾಂಸ್ಕೃತಿಕ ಕಾರ್ಯದರ್ಶಿ ಅರುಣ್ ಗೋಯೆಲ್‌ಗೆ ಪತ್ರ ಬರೆದಿದ್ದಾರೆ. 1930ರಲ್ಲಿ ಬ್ರಿಟಿಷ್ ಸರಕಾರ ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ನಡೆಸಲಾಗಿರುವ ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಸ್ಮಾರಕವು ಜನವರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗುವ ನಿರೀಕ್ಷೆಯಿದೆ. ಸ್ಮಾರಕದ ಸಂಕೀರ್ಣವು 15 ಎಕರೆಯಷ್ಟು ವಿಸ್ತಾರ ಪ್ರದೇಶದಲ್ಲಿರುವ ಕಾರಣ ಇಲ್ಲಿ ಪ್ರವಾಸಿಗರ ಆಕರ್ಷಣೆಗೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿ ನಡೆಸಲು ಹಾಗೂ ಸ್ಮಾರಕ ಲೋಕಾರ್ಪಣೆಗೊಂಡ ಬಳಿಕ ಅದರ ನಿರ್ವಹಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ವಿನಂತಿಸಲಾಗಿದೆ. ಉನ್ನತ ಮಟ್ಟದ ದಂಡಿ ಸ್ಮಾರಕ ಸಮಿತಿ(ಎಚ್‌ಎಲ್‌ಡಿಎಂಸಿ)ಯ ಸಲಹೆ ಪಡೆದು ಕೇಂದ್ರ ಸಾಂಸ್ಕೃತಿಕ ಇಲಾಖೆ ರೂಪಿಸಿರುವ ಈ ಯೋಜನೆಯನ್ನು ಅಂತರಾಷ್ಟ್ರೀಯ ವಿನ್ಯಾಸ ತಂಡದ ನೆರವಿನಿಂದ ಐಐಟಿ ಬಾಂಬೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

 ಸುಮಾರು 80ರಷ್ಟು ಸಹವರ್ತಿಗಳೊಂದಿಗೆ ಉಪ್ಪು ತಯಾರಿಯಲ್ಲಿ ತೊಡಗಿರುವ ಆಳೆತ್ತರದ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಸ್ಮಾರಕ ಒಳಗೊಂಡಿದೆ. ಬ್ರಿಟಿಷರು ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ ಗಾಂಧೀಜಿ ನಡೆಸಿದ ಸತ್ಯಾಗ್ರಹದ ಸ್ಥಳದಲ್ಲಿ ಸ್ಮಾರಕ ತಲೆಎತ್ತಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News