ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೇರಿ ಕೋಮ್ ಸೆಮಿ ಫೈನಲ್‌ಗೆ

Update: 2018-11-20 09:00 GMT

ಹೊಸದಿಲ್ಲಿ, ನ.20: ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಈ ಮೂಲಕ ಪದಕವನ್ನು ಖಚಿತಪಡಿಸಿದ್ದಾರೆ.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಯು ವು ಅವರನ್ನು 5-0 ಅಂತರದಿಂದ ಮಣಿಸಿದ ಮೇರಿ ಕೋಮ್ ಅಂತಿಮ-4ರ ಸುತ್ತು ತಲುಪಿದರು.

ಮೇರಿಕೋಮ್ ಮುಂದಿನ ಸುತ್ತಿನಲ್ಲಿ ಉತ್ತರಕೊರಿಯಾದ ಕಿಮ್ ಹಿಯಾಂಗ್ ಮಿ ಅವರನ್ನು ಎದುರಿಸಲಿದ್ದಾರೆ.

 ಈ ತನಕ ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಯಿಸಿ ಐರ್ಲೆಂಡ್‌ನ ಕಾಟಿ ಟೇಲರ್ ಅವರೊಂದಿಗೆ ದಾಖಲೆ ಹಂಚಿಕೊಂಡಿರುವ ಮೇರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಆರನೇ ಬಾರಿ ಚಿನ್ನ ಜಯಿಸಲು ಇನ್ನೆರಡು ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಮೇರಿಕೋಮ್ 2010ರ ಬಳಿಕ ಮೊದಲ ಬಾರಿ ಎಐಬಿಎ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

35ರ ಹರೆಯದ ಮಣಿಪುರದ ಮೂರು ಮಕ್ಕಳ ತಾಯಿ ಮೇರಿಕೋಮ್ ಮೊದಲ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಆ ಬಳಿಕ 2002ರಿಂದ 2010ರ ತನಕ ಸತತ ಐದು ಬಾರಿ ಚಿನ್ನದ ಪದಕ ಜಯಿಸಿದ್ದಾರೆ.

ಪ್ರಸ್ತುತ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಗೆಲ್ಲುವ ಮೊದಲು ಮೇರಿ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕಝಕ್‌ಸ್ತಾನದ ಎಜೆರಿಮ್ ಕೆಸ್ಸೆನಯೆವಾರನ್ನು 5-0 ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News