ಕಬ್ಬಿಗೆ ದರ ನಿಗದಿ ಮಾಡಲು ಸರಕಾರ ಕ್ರಮ: ಸಚಿವ ಕೆ.ಜೆ.ಜಾರ್ಜ್

Update: 2018-11-20 12:54 GMT

ಬೆಂಗಳೂರು, ನ. 20: ಪ್ರತಿಟನ್ ಕಬ್ಬಿಗೆ ಕೇಂದ್ರ ಸರಕಾರ 2,750 ರೂ.ಬೆಲೆ ನಿಗದಿಪಡಿಸಿದ್ದು, ಇದೀಗ ಕಬ್ಬಿನ ಇಳುವಳಿ ಹಾಗೂ ಉಪ ಉತ್ಪನ್ನಗಳನ್ನು ಆಧರಿಸಿ ರಾಜ್ಯ ಸರಕಾರ ಸ್ಥಳೀಯವಾಗಿ ಕಬ್ಬಿಗೆ ದರ ನಿಗದಿ ಮಾಡಲಿದೆ ಎಂದು ಸಕ್ಕರೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಬೆಲೆ ನಿಗದಿ ಸಂಬಂಧ ಪ್ರಸ್ತಾವ ಸಿದ್ಧಪಡಿಸಿದ್ದು, ಸಕ್ಕರೆ ಕಾರ್ಖಾನೆಗಳ ಅಭಿಪ್ರಾಯ ಕೋರಿದ್ದು, ಶೀಘ್ರದಲ್ಲೆ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಿನ್ನೆಯೆಷ್ಟೇ ಸಕ್ಕರೆ ನಿಯಂತ್ರಣ ಮಂಡಳಿಯ ಸಭೆ ನಡೆಸಿದ್ದು, ಜಿಲ್ಲಾಧಿಕಾರಿ ಮತ್ತು ಮಂಡಳಿ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ಯಾವ ಸಕ್ಕರೆ ಕಾರ್ಖಾನೆಗಳಿಂದ ಯಾವ ರೈತರಿಗೆ ಹಣ ಬಾಕಿ ಇದೆ ಎಂಬ ಬಗ್ಗೆ ಮಾಹಿತಿ ನೀಡಿದರೆ ಬಾಕಿ ಕೊಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರ ಅಭಯ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ಸಕ್ಕರೆ ಕಾರ್ಖಾನೆಗಳಿಂದ 2ಸಾವಿರ ಕೋಟಿ ರೂ.ಬಾಕಿಯನ್ನು ರೈತರಿಗೆ ಕೊಡಿಸಲಾಗಿದೆ. ಇದೀಗ ಕೇವಲ 38 ಕೋಟಿ ರೂ.ಗಳಷ್ಟು ಬಾಕಿ ಇದ್ದು, ಅದನ್ನು ಕೊಡಿಸಲಾಗುವುದು ಎಂದರು.

ಕಬ್ಬು ಬೆಳೆಯುವ ರೈತರು ಇದೀಗ ಕಬ್ಬಿಗೆ ಎಷ್ಟು ಬೆಂಬಲ ಬೆಲೆ ಕೇಳುತ್ತಿದ್ದು, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಮರ್ಪಕವಾದ ಬೆಲೆ ದೊರಕಿಸಿಕೊಡಲು ಸರಕಾರ ಬದ್ಧ ಎಂದ ಅವರು, ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು.

‘ತಾನು ಶಾಸಕ, ಸಚಿವನಾಗಬೇಕೆಂದು ರಾಜಕೀಯಕ್ಕೆ ಬಂದಿಲ್ಲ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹದ್ದೆ ಖಾತೆ ಬೇಕೆಂದೂ ನಾನು ಕೇಳಿಲ್ಲ. ಈಗಾಗಲೇ ನಾನು ಹಲವು ಖಾತೆಗಳನ್ನು ನಿರ್ವಹಿಸಿದ್ದು, ಐಟಿ-ಬಿಟಿ ಬಗ್ಗೆ ನನಗೆ ವಿಶೇಷ ಆಸಕ್ತಿ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಬಗ್ಗೆ ನಿರಾಸಕ್ತಿ ಎಂಬುದು ಶುದ್ಧ ಸುಳ್ಳು’

-ಕೆ.ಜೆ.ಜಾರ್ಜ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News