ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ: ಸಚಿವ ಝಮೀರ್ ಅಹ್ಮದ್

Update: 2018-11-20 14:16 GMT

ಬೆಂಗಳೂರು, ನ.20: ನರಗದ ಕೆ.ಆರ್.ಮಾರುಕಟ್ಟೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದ್ದು, ಯಾರಾದರು ಅನಗತ್ಯವಾಗಿ ಕಿರುಕುಳ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ಝಮೀರ್ ಆಹ್ಮದ್ ಖಾನ್ ಎಚ್ಚರಿಕೆ ನೀಡಿದರು.

ಮಂಗಳವಾರ ನಗರದ ಚಾಮರಾಜಪೇಟೆಯಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ, ಬಿಬಿಎಂಪಿ ಸಹಯೋಗದೊಂದಿಗೆ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಗುರುತಿನ ಚೀಟಿ ಪಡೆದ ಬೀದಿ ಬದಿಯ ವ್ಯಾಪಾರಿಗಳು ನೆಮ್ಮದಿಯ ಬದುಕು ಸಾಗಿಸಬೇಕು. ಬಿಸಿಲು, ಮಳೆ, ಚಳಿ ಎನ್ನದೆ ದುಡಿಯುವ ಇವರಿಗೆ ಯಾರೂ ತೊಂದರೆ ಕೊಡಬಾರದು. ಪೊಲೀಸರು, ಅಧಿಕಾರಿಗಳು ತಮ್ಮ ಅಧಿಕಾರ ಬಳಸಿಕೊಂಡು, ಇವರಿಂದ ಹಣ ವಸೂಲಿ ಮಾಡಬಾರದು. ಒಂದು ವೇಳೆ ಯಾರಾದರು ಹಣ ವಸೂಲಿಗೆ ಮುಂದಾದರೆ ನನಗೆ ದೂರು ನೀಡಿ ಎಂದು ಅವರು ವ್ಯಾಪಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳು ಅಧಿಕಾರಿಗಳಿಗೆ ಹೆದರಬೇಕಾಗಿಲ್ಲ. ಎಲ್ಲಿ ಬೇಕಾದರು ವ್ಯಾಪಾರ ಮಾಡಿಕೊಳ್ಳಬಹುದಾಗಿದೆ. ಹಾಗೂ ಸರಕಾರದಿಂದ ಸಣ್ಣ ಸೌಲಭ್ಯಗಳು ಲಭ್ಯವಾಗಲಿದ್ದು, ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ವೇಳೆ ಪಾಲಿಕೆ ಸದಸ್ಯೆ ನಝೀಮಾ ಅಯೂಬ್‌ ಖಾನ್, ಸಂಘದ ಅಧ್ಯಕ್ಷ ಸಿ.ಇ.ರಂಗಸ್ವಾಮಿ, ಕೆ.ಆರ್.ಮಾರುಕಟ್ಟೆ ಬೀದಿ ಬದಿ ವ್ಯಾಪಾರಿ ಸಂಘಗಳ ಅಧ್ಯಕ್ಷ ಎಂ.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 1.5ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಪಾಲಿಕೆ ಅಧಿಕಾರಿಗಳು ಕೇವಲ 24,629 ಬೀದಿ ಬದಿ ವ್ಯಾಪಾರಿಗಳ ಸರ್ವೆ ಮಾಡಿ ಪಟ್ಟಿ ತಯಾರಿಸಿದೆ. ಸರ್ವೇ ಕಾರ್ಯಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುವುದು ಸರಿಯಲ್ಲ. ಹಂತ, ಹಂತವಾಗಿ ಸರ್ವೇಕಾರ್ಯ ನಡೆಸಿ ಎಲ್ಲ ವ್ಯಾಪಾರಿಗಳಿಗೂ ಗುರುತಿನ ಚೀಟಿ ನೀಡಬೇಕೆಂದು ಬೀದಿ ಬದಿ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.

ಬೀದಿ ವ್ಯಾಪಾರಿಗಳೆಂದರೆ ಯಾರು?

ಕಲಾಸಿಪಾಳ್ಯ ವ್ಯಾಪ್ತಿಯ 1600 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಒಂದು ರಸ್ತೆ, ಗಲ್ಲಿ, ಪಾದಚಾರಿ ಮಾರ್ಗ, ಬೀದಿ ಬದಿ, ಸಾರ್ವಜನಿಕ ಉದ್ಯಾನ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ವ್ಯಾಪಾರ ಮಾಡುವವರನ್ನು ಬೀದಿ ವ್ಯಾಪಾರಿಗಳೆಂದು ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News