ನ.21 ರಂದು ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ

Update: 2018-11-20 13:39 GMT

ಬೆಂಗಳೂರು, ನ.20: ಕಬ್ಬಿನ ಬಾಕಿ ಬಿಡುಗಡೆ, ಬೆಂಬಲ ಬೆಲೆಗೆ ಆಗ್ರಹಿಸಿ ಹಾಗೂ ರೈತ ಮಹಿಳೆ ಬಗ್ಗೆ ಅವಮಾನಕರವಾಗಿ ಮಾತನಾಡಿದ್ದಾರೆಂದು ಆರೋಪಿಸಿ ನ.21 ರಂದು ರಾಜ್ಯಾದ್ಯಂತ ಬಿಜೆಪಿಯಿಂದ ಪ್ರತಿಭಟನೆ ಕರೆ ನೀಡಲಾಗಿದೆ.

ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯದಲ್ಲಿ ಕಬ್ಬು ಬೆಳೆಗಾರರು ಬೀದಿಗೆ ಬಂದು ಪ್ರತಿಭಟನೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯೇ ಕಾರಣಕರ್ತರಾಗಿದ್ದಾರೆ. ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಿದ್ದರೆ ರೈತರು ಬೀದಿಗಿಳಿಯುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿದರು.

ರೈತ ಮಹಿಳೆ ಕುರಿತು ಸಿಎಂ ಕುಮಾರಸ್ವಾಮಿ ಹೇಳಿಕೆ ಅಕ್ಷಮ್ಯ ಅಪರಾಧ. ಕುಮಾರಸ್ವಾಮಿಯನ್ನು ಹೋರಾಟ ನಿರತ ರೈತ ಮಹಿಳೆಯು ಮುಖ್ಯಮಂತ್ರಿಯಾಗಲು ಅನರ್ಹ ಎಂದಿದ್ದಾರೆ. ಅದರಲ್ಲಿ ತಪ್ಪು ಏನಿದೆ. ಆದರೆ, ಮುಖ್ಯಮಂತ್ರಿ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕೃತ ವಿರೋಧ ಪಕ್ಷ: ನಾವು ಅಧಿಕೃತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮೈತ್ರಿ ಸರಕಾರದಲ್ಲಿ ರೈತರ ಬಡ್ಡಿ ಕಡಿಮೆ ಮಾಡಿದಾಗ ನನ್ನ ಮೇಲೆ ಒತ್ತಡ ಹಾಕಿದ್ದು ಯಾರು? ಯಾರನ್ನ ಕೇಳಿ ಬಡ್ಡಿ ಕಡಿಮೆ ಮಾಡಿದ್ದಿರಿ ಅಂತ ದೇವೇಗೌಡರು ಮತ್ತು ಕುಮಾರಸ್ವಾಮಿ ಕೇಳಿರಲಿಲ್ಲವೆ ಎಂದು ಪ್ರಶ್ನಿಸಿದರು.

ಮುಂದಿನ ತಿಂಗಳು ಬೆಳಗಾವಿ ಅಧಿವೇಶನ ನಡೆಯುತ್ತಿರುವುದೇ ರೈತರು ಸೇರಿದಂತೆ ಎಲ್ಲ ವಿಚಾರ ಚರ್ಚೆ ಮಾಡುವುದಕ್ಕೆ. ಈ ಅಧಿವೇಶನದ ಸಂದರ್ಭದಲ್ಲಿ ಲಕ್ಷಾಂತರ ರೈತರನ್ನು ಸೇರಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಚುರುಕು ಮುಟ್ಟಿಸಲಾಗುತ್ತದೆ. ರಾಜ್ಯದಲ್ಲಿ 100 ತಾಲೂಕುಗಳು ಬರಪೀಡಿತವಾಗಿವೆ. ಆದರೆ, ಬರಪೀಡಿತ ಪ್ರದೇಶಗಳಿಗೆ ಸಂಬಂಧಪಟ್ಟ ಸಚಿವರು ಸೇರಿದಂತೆ ಯಾರೂ ಭೇಟಿ ನೀಡುತ್ತಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

ಯಾರೇ ಇರಲಿ, ಕ್ರಮ ಕೈಗೊಳ್ಳಿ

ಬಿಜೆಪಿ ನಾಯಕರ ಮಾಲಕತ್ವದ ಕಾರ್ಖಾನೆಗಳು ರೈತರ ಹಣ ಬಾಕಿ ಉಳಿಸಿಕೊಂಡಿದ್ದರೂ ಸರಿ, ಸಕ್ಕರೆ ಕಾರ್ಖಾನೆಗಳು ಯಾವುದೇ ಪಕ್ಷದ ನಾಯಕರದ್ದೇ ಆಗಲಿ ಮೊದಲು ಬಾಕಿ ಬಿಡುಗಡೆ ಮಾಡಬೇಕು. ಈ ಸಂಬಂಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲಿ ನಮ್ಮ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳ ಕಾರ್ಖಾನೆ ಇಲ್ಲ. ಹೀಗಾಗಿ, ಸಿಎಂ ಮೊದಲು ಬಾಕಿ ಕ್ಲಿಯರ್ ಮಾಡಿಸಲಿ.

-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News