ಕೆಂಪೇಗೌಡ ಪ್ರಶಸ್ತಿ: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾನದಂಡಗಳ ಅನುಕರಣೆಗೆ ಮುಂದಾದ ಬಿಬಿಎಂಪಿ

Update: 2018-11-20 13:46 GMT

ಬೆಂಗಳೂರು, ನ.20: ಕೆಂಪೇಗೌಡ ಜಯಂತಿ ಅಂಗವಾಗಿ ಬಿಬಿಎಂಪಿ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಸಾಧಕರ ಆಯ್ಕೆ ವೇಳೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಕೆಲ ಮಾನದಂಡಗಳನ್ನು ಅನುಸರಿಸಲು ಬಿಬಿಎಂಪಿ ಮುಂದಾಗಿದೆ.

ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ನಡೆದ ಗೊಂದಲ ಮರುಕಳಿಸದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ. ಅದರಂತೆ ಮುಂದಿನ ವರ್ಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಮಾರ್ಗಸೂಚಿ ರೂಪಿಸಲು ನಿರ್ಧರಿಸಿದೆ. ಅಲ್ಲದೆ, ಸಾಧಕರ ಆಯ್ಕೆಗಾಗಿಯೇ ಪ್ರತ್ಯೆಕ ಸಮಿತಿ ರಚಿಸುವ ಬಗ್ಗೆಯೂ ಚಿಂತಿಸಲಾಗಿದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.

ಗಣನೀಯ ಸಾಧನೆಗೆ ಆದ್ಯತೆ: ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಪ್ರಶಸ್ತಿಗಳಿಗೆ ಸರಕಾರ ಅನುಸರಿಸುವ ಮಾನದಂಡಗಳನ್ನು ಪಾಲಿಕೆಯೂ ನಿಗದಿ ಮಾಡಿದ್ದು, ನೈತಿಕ ಅಧಃಪತನ ಹೊಂದಿರುವ, ಅಪರಾಧ ಹಿನ್ನೆಲೆ ಹೊಂದಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದು, ಪ್ರಶಸ್ತಿ ಆಯ್ಕೆಗೆ ಸಲಹಾ ಸಮಿತಿ ನೀಡುವ ಹೆಸರುಗಳೇ ಅಂತಿಮವಾಗಿ ಪರಿಗಣಿಸುವುದು, ಶಿಫಾರಸು ಮಾಡುವ ಮೊದಲೇ ವ್ಯಕ್ತಿಯ ಹಿನ್ನೆಲೆ, ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಪರಿಗಣಿಸಬೇಕು ಸೇರಿದಂತೆ ಕೆಲವು ಅಂಶಗಳನ್ನು ಪಾಲಿಕೆಯು ಬಳಸಿಕೊಂಡು ಮಾರ್ಗಸೂಚಿಯನ್ನು ರೂಪಿಸಲಿದೆ.

ಪ್ರತಿಷ್ಠೆಗೆ ಬಲಿಯಾದ ಪ್ರಶಸ್ತಿ: ಪ್ರಸಕ್ತ ಸಾಲಿನಲ್ಲಿ ಮೂರು-ನಾಲ್ಕು ಬಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಿಗದಿ ಮಾಡಿ ಮುಂದೂಡಲಾಗಿತ್ತು. 230 ಜನ ಸಾಧಕರಿಗೆ ಪ್ರಶಸ್ತಿ ನೀಡಲು ಸಮಿತಿ ನಿರ್ಧಾರ ಮಾಡಿತ್ತಾದರೂ, ಪ್ರದಾನ ಸಮಾರಂಭದಲ್ಲಿ ಪಾಲಿಕೆ ಸದಸ್ಯರ ಬೆಂಬಲಿಗರು, ರಾಜಕೀಯ ಪಕ್ಷಗಳ ನಾಯಕರು ವೇದಿಕೆಗೆ ಬಂದದ್ದರಿಂದ ಗೊಂದಲದ ಗೂಡಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News