ಮಾಧ್ಯಮ ಕೇಂದ್ರದಲ್ಲೇ ಸಭೆ, ಸುದ್ದಿಗೋಷ್ಠಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-20 13:48 GMT

ಬೆಂಗಳೂರು, ನ.20: ಸುದ್ದಿಗೋಷ್ಠಿ, ಸರಕಾರದ ಪ್ರಮುಖ ಸಭೆಗಳನ್ನು ವಾರ್ತಾ ಭವನದ ಮಾಧ್ಯಮ ಕೇಂದ್ರದಲ್ಲಿಯೇ ಜರುಗಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿನ ಮಹಾತ್ಮ ಗಾಂಧೀಜಿ ಮಾಧ್ಯಮ ಕೇಂದ್ರ ಹಾಗೂ ವಾರ್ತಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮ ಕೇಂದ್ರದ ಕಟ್ಟಡದಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳಿವೆ. ಅಲ್ಲದೆ, ಇತ್ತೀಚಿಗೆ ವಿಧಾನಸೌಧದಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಿರುವುದರಿಂದ ಇಂತಹ ಸಭೆ ಹಾಗೂ ಮಾಧ್ಯಮಗೋಷ್ಠಿಗಳನ್ನು ಮಾಧ್ಯಮ ಕೇಂದ್ರದಲ್ಲಿ ಆಯೋಜಿಸುವ ಮೂಲಕ ಮಾಧ್ಯಮದವರಿಗೂ ಅನುಕೂಲ ಕಲ್ಪಿಸಬಹುದು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ವರದಿ ಅನುಷ್ಠಾನ: ವಾರ್ತಾ ಇಲಾಖೆಯ ಪುನರ್ ರಚನೆಗೆ ಸಂಬಂಧಿಸಿದಂತೆ ರಚಿಸಿರುವ ಎಂ.ಆರ್.ಶ್ರೀನಿವಾಸ್ ಮೂರ್ತಿ ಅವರ ನೇತೃತ್ವದ ಸಮಿತಿ ನೀಡುವ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 30 ಜಿಲ್ಲೆಗಳಲ್ಲಿ ನಡೆಯುತ್ತಿರುವ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರಗಳ ಕಾಮಗಾರಿ ತ್ವರಿತಗೊಳಿಸುವುದೂ ಸೇರಿದಂತೆ ವಾರ್ತಾ ಇಲಾಖೆ ಅಗತ್ಯ ಸಿಬ್ಬಂದಿ ನೇಮಕಕ್ಕೂ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಹೊಸದಿಲ್ಲಿ ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಪ್ರಸ್ತುತ 3.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರ ದೇಶದಲ್ಲೆ 2ನೆ ಸ್ಥಾನದಲ್ಲಿದೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಪಿ.ದಿನೇಶ್ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣವನ್ನು ಚುರುಕುಗೊಳಿಸಬೇಕಿದೆ. ಆಧುನಿಕ ತಂತ್ರಜ್ಞಾನ ಅನುಸರಿಸಿ ಇಲಾಖೆಯ ಕಾರ್ಯನಿರ್ವಹಿಸಲು ಅನುವಾಗುವಂತೆ ಸಿಬ್ಬಂದಿಗಳ ಕೊರತೆ ನೀಗಿಸಲು ನೇಮಕಾತಿ ಮಾಡಬೇಕೆಂದರು.

ಸರಕಾರದ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಸುಲಭವಾಗಿ ದೊರೆಯುವುದಿಲ್ಲ. ಮಾಧ್ಯಮ ಕೇಂದ್ರದಲ್ಲಿ ಒಮ್ಮೆಯಾದರೂ ಬರುವಂತಾಗಬೇಕು. ಅಲ್ಲದೆ, ಸಚಿವರು, ಸಚಿವರ ಪತ್ರಿಕಾ ಗೋಷ್ಠಿಗಳು ಇಲ್ಲಿ ನಡೆಸಲು ತೀರ್ಮಾನ ಕೈಗೊಳ್ಳುವುದರಿಂದ ಮಾಧ್ಯಮದ ಕೇಂದ್ರದ ಸದುಪಯೋಗ ಆಗಬೇಕಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಜಂಟಿ ನಿರ್ದೇಶಕ ರವಿಕುಮಾರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News