ನ.29ರಿಂದ ಬೆಂಗಳೂರಿನಲ್ಲಿ ಟೆಕ್ ಶೃಂಗಸಭೆ: ಸಚಿವ ಕೆ.ಜೆ.ಜಾರ್ಜ್

Update: 2018-11-20 13:57 GMT

ಬೆಂಗಳೂರು, ನ. 20: ಮಾಹಿತಿ ತಂತ್ರಜ್ಞಾನ, ಉದ್ದಿಮೆಗಳ ಬೆಳವಣಿಗೆ ದೃಷ್ಟಿಯಿಂದ ರಾಜ್ಯ ಸರಕಾರ ನ.29ರಿಂದ ಡಿಸೆಂಬರ್ 1ರವರೆಗೆ ‘ಬೆಂಗಳೂರು ಟೆಕ್ ಶೃಂಗಸಭೆ’ ಏರ್ಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ಸಿದ್ಧಗೊಳ್ಳುತ್ತಿದೆ. ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ಟೆಕ್ ಸಮಾವೇಶ ನಡೆಯುತ್ತಿದ್ದು, ದೇಶ, ವಿದೇಶಗಳಿಂದ 3773 ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ವಸ್ತು ಪ್ರದರ್ಶನಕ್ಕೆ 246ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, 100ಕ್ಕೂ ಹೆಚ್ಚು ನವೋದ್ಯಮಗಳು ಇಲ್ಲಿ ಭಾಗವಹಿಸುತ್ತಿವೆ. ಸುಮಾರು 9 ದೇಶಗಳ ಪ್ರತಿಷ್ಠಿತ ಕಂಪೆನಿಗಳು ಸೇರಿದಂತೆ 1500ಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಳ್ಳುತ್ತಿದ್ದು, ಸಮಾವೇಶಕ್ಕೆ 11ಸಾವಿರಕ್ಕೂ ಹೆಚ್ಚು ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.

ಸಮಾವೇಶದಲ್ಲಿ ಪಾಲುದಾರಿಕೆ ಮತ್ತು ಸಹಭಾಗಿತ್ವಕ್ಕೆ ಒತ್ತು ನೀಡಲಾಗುತ್ತಿದ್ದು, ಬಂಡವಾಳ ಹೂಡಿಕೆ ಯಾವುದೇ ಗುರಿ ಹೊಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಈ ಸಮಾವೇಶದ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ ಎಂದು ಕೆ.ಜೆ.ಜಾರ್ಜ್ ಭರವಸೆ ವ್ಯಕ್ತಪಡಿಸಿದರು.

ಬೆಂಗಳೂರು ಟೆಕ್ ಶೃಂಗಸಭೆ ಅಂಗವಾಗಿ 68 ರಾಷ್ಟ್ರಗಳಿಂದ 4157 ತಂಡಗಳು ಹ್ಯಾಕಥಾನ್‌ನಲ್ಲಿ ಭಾಗವಹಿಸುತ್ತಿವೆ. ಫಿನ್‌ಲ್ಯಾಂಡ್, ಜರ್ಮನಿ, ಫ್ರಾನ್ಸ್, ನೆದರ್‌ಲ್ಯಾಂಡ್, ಎಸ್ಟೋನಿಯ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಇನ್ನಿತರ ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News