ಫೆಬ್ರವರಿ ವೇಳೆಗೆ ಜಯನಗರ ಈಜುಕೊಳ ಕಾಮಗಾರಿ ಪೂರ್ಣ: ಶಾಸಕಿ ಸೌಮ್ಯರೆಡ್ಡಿ

Update: 2018-11-20 14:04 GMT

ಬೆಂಗಳೂರು, ನ. 20: ಜಯನಗರ ಕ್ಷೇತ್ರದ ಭೈರಸಂದ್ರ ವಾರ್ಡ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂತರ್‌ರಾಷ್ಟ್ರೀಯ ಮಟ್ಟದ ಜಯನಗರ ಈಜುಕೊಳ ಬರುವ ಫೆಬ್ರವರಿ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಬೇಕು ಎಂದು ಶಾಸಕಿ ಸೌಮ್ಯ ರೆಡ್ಡಿ, ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದಾರೆ.

ಮಂಗಳವಾರ ಈಜುಕೊಳ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸೌಮ್ಯರೆಡ್ಡಿ, ಈ ಬಾರಿಯ ಬೇಸಿಗೆ ವೇಳೆಗೆ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಈಜುಕೊಳ ಲಭ್ಯವಾಗಬೇಕು. ಹಗಲು-ರಾತ್ರಿ ಕೆಲಸ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಜಯನಗರ ಈಜುಕೋಳ ಕರ್ನಾಟಕದಲ್ಲಿಯೇ ಮಾದರಿಯಾಗಲಿದ್ದು, ಇಲ್ಲಿ ಮಕ್ಕಳು, ವಯಸ್ಕರು ಮತ್ತು ಹಿರಿಯರಿಗಾಗಿಯೇ ಪ್ರತ್ಯೇಕ ಈಜುಕೊಳಗಳನ್ನು ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಬಿಸಿ ನೀರಿನ ಈಜುಕೊಳ ನಿರ್ಮಿಸುತ್ತಿರುವುದು ವಿಶೇಷ. ಇಂತಹ ಈಜುಕೊಳದಲ್ಲಿ ಎಲ್ಲ ವಯಸ್ಸಿನವರು ಮಳೆ, ಚಳಿ, ಗಾಳಿ ಎನ್ನದೇ ವರ್ಷ ಪೂರ್ತಿ ಈಜಲು ಸಹಕಾರಿಯಾಗಲಿದೆ ಎಂದರು.

ಅಂತರ್‌ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳನ್ನು ಆಯೋಜಿಸುವುದು, ಉತ್ತಮ ಈಜುಪಟುಗಳನ್ನು ತಯಾರು ಮಾಡುವ ಮಹತ್ವಾಕಾಂಕ್ಷೆಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ ಎರಡು ವರ್ಷಗಳಿಂದ ಈ ಕಾಮಗಾರಿ ಪ್ರಗತಿಯಾಗಿಲ್ಲ. ಶೇ.70ರಷ್ಟು ಮಾತ್ರ ಪೂರ್ಣಗೊಂಡಿದೆ. ಇದರ ಜತೆಗೆ ಈಜುಕೊಳದ ಬಳಿ ಮಾದರಿ ಉದ್ಯಾನವವನ್ನು ನಿರ್ಮಾಣ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ, ಈಜು ತರಬೇತಿ ಮತ್ತಿತರ ಚಟುವಟಿಕೆಗಳನ್ನು ಆರಂಭಿಸಲಾಗುವುದು. ಮಕ್ಕಳ ಕನಸು ಭಗ್ನಗೊಳ್ಳಲು ಅವಕಾಶ ನೀಡುವುದಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡುವುದು ಎಂದು ಶಾಸಕಿ ಸೌಮ್ಯರೆಡ್ಡಿ ಸ್ಪಷ್ಟಪಡಿಸಿದರು. ಪಾಲಿಕೆ ಸದಸ್ಯ ಎನ್.ನಾಗರಾಜು, ಬಿಬಿಎಂಪಿ ಜಂಟಿ ಆಯುಕ್ತ ವಿಶ್ವನಾಥ್, ಮುಖ್ಯ ಇಂಜಿನಿಯರ್ ಪ್ರಭಾಕರನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News