ಗೋವಿಂದರಾಜನಗರದಲ್ಲಿ ಬೃಹತ್ ಡಿಜಿಟಲ್ ಗ್ರಂಥಾಲಯ ಸ್ಥಾಪನೆ ಶೀಘ್ರ: ಶಾಸಕ ವಿ.ಸೋಮಣ್ಣ

Update: 2018-11-20 14:07 GMT

ಬೆಂಗಳೂರು, ನ.20: ಇಲ್ಲಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ದೇಶದಲ್ಲಿಯೆ ಉತ್ಕೃಷ್ಟವಾದಂತಹ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಸ್ಥಳ ಗೊತ್ತುಪಡಿಸಲಾಗಿದೆ ಎಂದು ಶಾಸಕ ವಿ.ಸೋಮಣ್ಣ ತಿಳಿಸಿದರು.

ಮಂಗಳವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಂಪಿ ನಗರದಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಹಾಗೂ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳುನಾಡಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಸುಮಾರು ಆರು ಅಂತಸ್ತಿನ ಕಟ್ಟಡದ ಗ್ರಂಥಾಲಯ ನಿರ್ಮಾಣಗೊಂಡಿದ್ದು, ದಕ್ಷಿಣ ಭಾರತದಲ್ಲಿಯೆ ದೊಡ್ಡ ಗ್ರಂಥಾಲಯವೆಂದು ಪ್ರಸಿದ್ಧಿಯಾಗಿದೆ. ಅದೇ ಮಾದರಿಯಲ್ಲಿ ಗೋವಿಂದರಾಜ ನಗರದಲ್ಲಿ ಸುಮಾರು ಎರಡೂವರೆ ಎಕರೆಯಲ್ಲಿ ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯವನ್ನು ಮುಂದಿನ ಎರಡು ವರ್ಷದಲ್ಲಿ ನಿರ್ಮಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯನಗರದ, ಗೋವಿಂದರಾಜನಗರ ಹಾಗೂ ಹಂಪಿನಗರದಲ್ಲಿ ಐಎಎಸ್, ಕೆಎಎಸ್ ಸೇರಿದಂತೆ ಸರಕಾರದ ವಿವಿಧ ಹುದ್ದೆಗಳಿಗೆ ತರಬೇತಿ ಕೊಡುವಂತಹ ಹಲವು ಸಂಸ್ಥೆಗಳಿವೆ. ಹೀಗಾಗಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ತರಬೇತಿ ಅನುಕೂಲವಾಗುವ ನಿಟ್ಟಿನಲ್ಲಿ ಈ ಭಾಗದಲ್ಲಿ ನೆಲೆಸುತ್ತಾರೆ. ಈ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಂಪಿನಗರದಲ್ಲಿ ಸುಸಜ್ಜಿತವಾದಂತಹ ನಗರದ ಕೇಂದ್ರ ಗ್ರಂಥಾಲಯ ಸ್ಥಾಪನೆಗೊಂಡಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಗ್ರಂಥಾಲಯ ಇಲಾಖೆ ನಗರ ಪ್ರದೇಶಕ್ಕಿಂತ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯ ಇಲಾಖೆಯೊಂದು ಇದೆ ಎಂಬ ಕಲ್ಪನೆಯು ಇಲ್ಲವಾಗಿದೆ. ಇಂತಹ ಪ್ರದೇಶದಲ್ಲಿ ಗ್ರಂಥಾಲಯ ಇಲಾಖೆ ತಲುಪಿ, ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಜನತೆಗೆ ಓದುವ ಅಭಿರುಚಿಯನ್ನು ಬೆಳೆಸಬೇಕಿದೆ ಎಂದು ಅವರು ಆಶಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ್ ಹೊಸಮನಿ ಮಾತನಾಡಿ, ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಗ್ರಂಥಾಲಯ ಇಲಾಖೆಯ ಕಾರ್ಯ ಶ್ಲಾಘನೀಯವಾದದ್ದು, ಪ್ರತಿ ಗ್ರಂಥಾಲಯವು ಓದುಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ವರ್ಷಾದ್ಯಂತ ಸ್ವ ಆಸಕ್ತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸಿಬ್ಬಂದಿ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ವೇಳೆ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಹಿರಿಯ ಲೇಖಕ ಶೂದ್ರ ಶ್ರೀನಿವಾಸ್, ರಾಜ್ಯ ಗ್ರಂಥಾಲಯ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಡಾ.ಪಿ.ವೈ.ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News