ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Update: 2018-11-20 14:19 GMT

ಬೆಂಗಳೂರು, ನ.20: ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಗಳ ಅಧಿಕಾರ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಎಷ್ಟು ವರದಿಗಳನ್ನು ಜಾರಿ ಮಾಡಿದೆ ಎಂಬುದು ಇಂದಿನ ನಾಯಕರಿಗೆ ತಿಳಿದಿದೆಯಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜಕೀಯ ಮೀಸಲಾತಿ ನೀಡುವ ಸಂಬಂಧ ಸಂವಿಧಾನದ ಕಲಂ 73 ಮತ್ತು 74ಕ್ಕೆ ತಿದ್ದುಪಡಿ ತಂದು ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದ್ದರು. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ನಾಗನಗೌಡ ಆಯೋಗ, ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ ಹಾಗೂ ಚಿನ್ನಪ್ಪರೆಡ್ಡಿ ಆಯೋಗಗಳನ್ನು ಮಾಡಿದ್ದರು. ಇವೆಲ್ಲಾ ನಿಮಗೆ ತಿಳಿದಿದೆಯಾ ಎಂದು ವೇದಿಕೆಯಲ್ಲಿದ್ದವರನ್ನು ಪ್ರಶ್ನಿಸಿದರು.

ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲು, ಭವಿಷ್ಯವನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಜನಪ್ರತಿನಿಧಿಗಳು, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಹಿಂದಿನ ನಾಯಕರು ಮಾಡಿರುವ ಸಾಧನೆಗಳನ್ನು ಅರಿಯಬೇಕು ಹಾಗೂ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಇಂದು ಬಿಜೆಪಿ ನಾಯಕರು ಇತಿಹಾಸವನ್ನು ತಿರುಚಲು ಮುಂದಾಗಿದ್ದಾರೆ ಎಂದು ಅವರು ಆಪಾದಿಸಿದರು.

ಬಿಜೆಪಿ ನಾಯಕರಿಗೆ ಹಿಂದುಳಿದ ವರ್ಗಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದ ಅವರು, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿಯನ್ನು ವಿರೋಧಿಸಿ ಬಿಜೆಪಿ ನಾಯಕ ರಾಮಾ ಜೋಯಿಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಸಾಮಾಜಿಕ ನ್ಯಾಯದ ಪರವಾಗಿ ಇದ್ದೇವೆ ಎನ್ನುವ ಬಿಜೆಪಿಗರು ಯುಪಿಎ ಸರಕಾರದ ಅವಧಿಯಲ್ಲಿ ಶಿಕ್ಷಣ ಮಂತ್ರಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಮಸೂದೆ ಮಂಡಿಸಿದ ವೇಳೆ ಬಿಜೆಪಿ ನಾಯಕರು ಕರ್ನಾಟಕದಲ್ಲಿ ಪ್ರತಿಭಟನೆ ನಡೆಸಿದ್ದರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಇಂದಿಗೂ ಹಿಂದುಳಿದ ನಾಯಕರು ಉಳಿದುಕೊಂಡಿದ್ದಾರೆ ಎಂದರೆ ಅದಕ್ಕೆ ಕಾರಣ ದೇವರಾಜ ಅರಸು. ಮೇಲ್ಜಾತಿಗಳ ಹಿಡಿತದಲ್ಲಿದ್ದ ಸಂದರ್ಭದಲ್ಲಿ ಅರಸು ಅವರು ಅರ್ಹರನ್ನು ಗುರುತಿಸಿ ರಾಜಕಾರಣದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದರು. ಹೀಗಾಗಿ, ಇಂದಿಗೂ ಅವರು ರಾಜಕೀಯವಾಗಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.

ಸುಳ್ಳು ಆಧಾರಿತ ರಾಜಕಾರಣ: ಬಿಜೆಪಿ ನಾಯಕರು ವಿಚಾರಗಳನ್ನಿಟ್ಟುಕೊಂಡು ರಾಜಕಾರಣ ಮಾಡದೆ, ಕೇವಲ ಸುಳ್ಳುಗಳನ್ನೇ ಪ್ರಚಾರ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ರಾಜೀವ್ ಗಾಂಧಿ, ಇಂದಿರಾಗಾಂಧಿ ಬಗ್ಗೆ ಟೀಕೆ ಮಾಡುತ್ತಾ, ಹತ್ತಾರು ವರ್ಷಗಳ ಹಿಂದಿನ ನಡೆಯದೇ ಇದ್ದ ಬೋಫೋರ್ಸ್ ಹರಣದ ಬಗ್ಗೆ ಮಾತನಾಡುತ್ತಾರೆ. ಆದರೆ, ಸಾವಿರಾರು ಕೋಟಿ ರೂ.ಗಳ ರಫೇಲ್ ಹಗರಣದ ಬಗ್ಗೆ ಬಾಯಿ ಬಿಚ್ಚುತ್ತಿಲ್ಲ ಯಾಕೆ ಎಂದು ಗುಂಡೂರಾವ್ ಪ್ರಶ್ನಿಸಿದರು.

ದೇಶದಲ್ಲಿ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಸರಕಾರಿ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಕ್ತ ದೇಶ, ಬಿಜೆಪಿ ಮುಕ್ತ ಭಾರತ ನಿರ್ಮಿಸಿದಾಗಲೇ ದೇಶ ಉಳಿಯುತ್ತದೆ. ಅದರ ಭಾಗವಾಗಿ ಎಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಮೀಸಲಾತಿಯಿಂದ ವಂಚಿತರಾದವರಿಗೆ ಮೊದಲ ಬಾರಿಗೆ ಅವಕಾಶ ಕಲ್ಪಿಸಿದ್ದು ಶಾಹು ಮಹಾರಾಜ್. ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ಸ್‌ ಆಯೋಗದ ಮೂಲಕ ಮೀಸಲಾತಿ ಕಲ್ಪಿಸಿದರು. ಆಗ ವಿರೋಧಿಸಿದವರೇ ಇಂದೂ ಮೀಸಲಾತಿಯನ್ನು ವಿರೋಧ ಮಾಡುತ್ತಿದ್ದಾರೆ. ವ್ಯಕ್ತಿಗಳ ಸಾಧನೆ ಬಗ್ಗೆ ಓದದೆ, ಆಧಾರ ರಹಿತವಾಗಿ ಟೀಕೆ ಮಾಡುವುದು ಸರಿಯಲ್ಲ. ಟಿಪ್ಪು ಅಷ್ಟೇ ಅಲ್ಲ ಅಶೋಕನ ಕಾಲದಿಂದಲೂ ಯುದ್ಧಗಳ ಸಂದರ್ಭದಲ್ಲಿ ಹತ್ಯೆಗಳು ನಡೆದಿವೆ. ಅದನ್ನೇ ಮುಂದಿಟ್ಟುಕೊಂಡು ಅವರು ಮಾಡಿರುವ ಸಾಧನೆಗಳನ್ನು ಮರೆಯಬಾರದು.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳು ಕಳೆಯುತ್ತಿದೆ. ಆದರೆ, ಅವರು ಜನರಿಗೆ ನೀಡಿದ ಒಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ. ವಿದ್ಯಾರ್ಥಿ, ಯುವಜನರು, ದಲಿತರು, ಹಿಂದುಳಿದವರು, ಮಹಿಳೆಯರಿಗೆ ಮೋಸ ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿಕೊಂಡು, ತಮ್ಮನ್ನು ರಕ್ಷಿಸಿಕೊಳ್ಳಲು ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಬೇಕು.

-ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News