ಡಿ.10 ರಿಂದ ಚಳಿಗಾಲದ ಅಧಿವೇಶನಕ್ಕೆ ರಾಜ್ಯಪಾಲರ ಅನುಮೋದನೆ

Update: 2018-11-20 14:21 GMT

ಬೆಂಗಳೂರು, ನ. 20: ರಾಜ್ಯದಲ್ಲಿ ರೈತರ ಪ್ರತಿಭಟನೆ ಕಾವೇರುತ್ತಿರುವ ಬೆನ್ನಲ್ಲೆ ಡಿಸೆಂಬರ್ 10ರಿಂದ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ.

ರಾಜ್ಯ ಸರಕಾರದ ಶಿಫಾರಸ್ಸನ್ನು ಆಧರಿಸಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಡಿ.10ರಿಂದ 21ರ ವರೆಗೆ ಒಟ್ಟು ಹತ್ತು ದಿನಗಳ ಕಾಲ ವಿಧಾನ ಮಂಡಲ ಅಧಿವೇಶಕ್ಕೆ ಅನುಮೋದನೆ ನೀಡಿದ್ದಾರೆ. ಡಿ.10ರ ಮಧ್ಯಾಹ್ನ 12:15ಕ್ಕೆ ಕಲಾಪ ಸಮಾವೇಶಗೊಳ್ಳಲಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಇದೇ ಮೊದಲ ಅಧಿವೇಶನವಾಗಿದ್ದು, ಕುಮಾರಸ್ವಾಮಿಯವರು ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆ ಮೊದಲ ಬಾರಿಗೆ ಬೆಳಗಾವಿ ಅಧಿವೇಶನಕ್ಕೆ ಚಾಲನೆ ನೀಡಿದ್ದರು.

ಇದೀಗ 12 ವರ್ಷಗಳ ಬಳಿಕ ಮತ್ತೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಮತ್ತೊಮ್ಮೆ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಆಗಿ ಪಾಲ್ಗೊಳ್ಳುತ್ತಿದ್ದು, ಮೈತ್ರಿ ಸರಕಾರಕ್ಕೆ ಈ ಅಧಿವೇಶನ ಒಂದು ರೀತಿಯಲ್ಲಿ ದೊಡ್ಡ ಸವಾಲಾಗಿದೆ.

ಕಬ್ಬು ಬೆಳೆಗಾರರ ಬಾಕಿ ಕೊಡಿಸಬೇಕೆಂದು ಆಗ್ರಹಿಸಿ ರೈತರು ಬೀದಿಗಿಳಿಸಿದ್ದಾರೆ. ಈ ಮಧ್ಯೆಯೇ ರಾಜ್ಯದಲ್ಲಿನ ಬರ-ನೆರೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ವಿಪಕ್ಷ ಬಿಜೆಪಿಯೂ ಸಜ್ಜಾಗಿದ್ದು, ಬೆಳಗಾವಿ ಅಧಿವೇಶನಕ್ಕೆ ಅಧಿಕೃತವಾಗಿ ದಿನಾಂಕ ಘೋಷಣೆಯಾಗಿದ್ದು ಕುತೂಹಲ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News