ಗ್ರಂಥಪಾಲಕರ ವೇತನ 17 ಸಾವಿರ ರೂ.ಗೆ ಏರಿಕೆಯಾಗಲಿ: ಡಾ.ಸಿದ್ದಲಿಂಗಯ್ಯ

Update: 2018-11-20 14:24 GMT

ಬೆಂಗಳೂರು, ನ.20: ಗ್ರಾಮ ಪಂಚಾಯತ್ ಗ್ರಂಥಾಲಯದ ಗ್ರಂಥಪಾಲಕರಿಗೆ ಕೊಡುತ್ತಿರುವ 4 ರಿಂದ 7 ಸಾವಿರ ರೂ. ವೇತನವನ್ನು ಕನಿಷ್ಠ 17 ಸಾವಿರ ರೂ.ಗೆ ಏರಿಕೆ ಮಾಡಬೇಕೆಂದು ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಆಗ್ರಹಿಸಿದರು.

ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರಿ ನೌಕರನಿಗೆ ಕೇವಲ 7 ಸಾವಿರ ರೂ. ವೇತನ ನೀಡುವುದು ಅವಮಾನಕರ. ಪೌರಕಾರ್ಮಿಕರ ಹೋರಾಟದ ಫಲವಾಗಿ ಸರಕಾರ ಈಗ ತಿಂಗಳಿಗೆ 17 ಸಾವಿರ ರೂ. ವೇತನ ನಿಗದಿ ಮಾಡಿದೆ. ಅದೇ ರೀತಿ ಗ್ರಂಥಪಾಲಕರಿಗೂ ಅಷ್ಟೇ ಹಣವನ್ನು ನಿಗದಿ ಮಾಡಬೇಕು ಎಂದರು.

ಇವತ್ತಿನ ಯುವ ಸಮುದಾಯಕ್ಕೆ ಹಿರಿಯ ಕವಿಗಳು, ಸಾಹಿತಿಗಳ ಹೆಸರು ಗೊತ್ತಿಲ್ಲ. ಉನ್ನತಸ್ಥಾನದಲ್ಲಿದ್ದರೂ ಅವರಿಗೆ ಕನ್ನಡ ಸಂಸ್ಕೃತಿಯ ಕುರಿತು ಅರಿವಿಲ್ಲ. ಇಂತಹ ಪರಿಸ್ಥಿತಿಯನ್ನು ಬದಲಾಯಿಸಬೇಕಾದರೆ ಅದು ಗ್ರಂಥಾಲಯ ಇಲಾಖೆಯಿಂದ ಮಾತ್ರ ಸಾಧ್ಯ. ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ, ಇನ್ನಿತರ ಕಾರ್ಯಕ್ರಮಗಳನ್ನು ಮಾಡಿದೆ. ಜತೆಗೆ ಪುಸ್ತಕ ಭಾಗ್ಯವನ್ನೂ ಮಾಡಬೇಕೆಂದು ಅವರು ತಿಳಿಸಿದರು.

ಸರಕಾರ ಉಳಿಸಿಕೊಂಡಿರುವ 350 ಕೋಟಿ ರೂ.ಸೆಸ್‌ನಲ್ಲಿ 50 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದೆ, ಅದನ್ನು ಕೂಡಲೇ ಮಾಡಬೇಕು. ಉಳಿದ ಹಣದಲ್ಲಿ 200 ಕೋಟಿ ರೂ.ಅನ್ನು ಅಂತರ್‌ರಾಷ್ಟ್ರೀಯ ಗ್ರಂಥಾಲಯ ನಿರ್ಮಾಣಕ್ಕಾಗಿ ಖರ್ಚು ಮಾಡಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News