ಕಬ್ಬು ಬೆಳೆಗಾರರಿಗೆ ಕೊಟ್ಟ ಮಾತಿನಂತೆ ಕಾರ್ಖಾನೆಗಳು ಹಣ ಪಾವತಿಸಬೇಕು: ಸಿಎಂ ಕುಮಾರಸ್ವಾಮಿ

Update: 2018-11-20 14:59 GMT

ಬೆಂಗಳೂರು, ನ.20: ಸಕ್ಕರೆ ಕಾರ್ಖಾನೆ ಮಾಲಕರು ಕಬ್ಬು ಬೆಳೆಗಾರರಿಗೆ ಕೊಟ್ಟ ಮಾತಿನಂತೆ ಹಣ ಪಾವತಿಸಬೇಕು. ಸಕ್ಕರೆ ದರ ಕುಸಿತದ ನೆಪವೊಡ್ಡಿ ರೈತರನ್ನು ಸಂಕಷ್ಟಕ್ಕೆ ತಳ್ಳಲು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಮಾಲಕರ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ಟನ್ ಕಬ್ಬಿಗೆ ರೈತರಿಗೆ 2900 ರೂ. ನೀಡುವುದಾಗಿ ಕೆಲವು ಸಕ್ಕರೆ ಕಾರ್ಖಾನೆಗಳು ಮೌಖಿಕ ಒಪ್ಪಂದ ಮಾಡಿಕೊಂಡಿದ್ದವು. ಈ ಪೈಕಿ ಕೆಲವರು 2000, 2200, 2500 ರೂ. ಹೀಗೆ ತಮಗಿಷ್ಟ ಬಂದಂತೆ ದರ ನೀಡಿ ಕಬ್ಬು ಖರೀದಿ ಮಾಡಿವೆ. ನ.22ರೊಳಗೆ ಸಕ್ಕರೆ ಕಾರ್ಖಾನೆಗಳ ಮಾಲಕರ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಬ್ಬು ಬೆಳೆಗಾರರು ಈ ಸಭೆಯಲ್ಲಿ ತಮ್ಮ 13 ಸಮಸ್ಯೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ವಿಶೇಷವಾಗಿ ತೂಕದಲ್ಲಿ ಆಗುತ್ತಿರುವ ಮೋಸದ ಕುರಿತು ಗಮನ ಸೆಳೆದಿದ್ದಾರೆ. ಆದುದರಿಂದ, ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಸಮಪರ್ಕವಾದ ತೂಕ ಮಾಪನ ಉಪಕರಣಗಳನ್ನು ಅಳವಡಿಸುವಂತೆ ಸೂಚನೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

2018-19ನೆ ಸಾಲಿನ ಎಫ್‌ಆರ್‌ಪಿ ದರವನ್ನು ಕಾರ್ಖಾನೆ ಮಾಲಕರು 15 ದಿನಗಳಲ್ಲಿ ಒಂದೇ ಹಂತದಲ್ಲಿ ಪಾವತಿಸಲು ಸೂಚನೆ ನೀಡಲು ನಿರ್ಧರಿಸಲಾಗಿದೆ. ಎಕ್ಸ್‌ಫೀಲ್ಡ್ ಬಗ್ಗೆ ತೀರ್ಮಾನ ಮಾಡುವಂತೆಯೂ ಕಬ್ಬು ಬೆಳೆಗಾರರು ಮನವಿ ಮಾಡಿದ್ದಾರೆ. ರೈತರ ಬೇಡಿಕೆಯನ್ನು ಪರಿಗಣಿಸಿ, ಮಾಲಕರ ಜೊತೆ ಚರ್ಚಿಸಿ, ಸರಕಾರದ ಮಟ್ಟದಲ್ಲಿ ತೀರ್ಮಾನ ಮಾಡುವಂತೆ ಸಕ್ಕರೆ ಆಯುಕ್ತರಿಗೆ ಅಧಿಕಾರ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪುನಃ ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲಕರ ಸಭೆಯನ್ನು ನಡೆಸಲಾಗುವುದು. ಕೇಂದ್ರ ಸರಕಾರವು 2017-18ನೆ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 2750 ರೂ. ಎಫ್‌ಆರ್‌ಪಿ ದರ ನಿಗದಿ ಮಾಡಿತ್ತು. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಕೆಲವು ಕಾರ್ಖಾನೆಗಳು 2500 ರೂ.ಗಳನ್ನು ನೀಡಿಲ್ಲ. ಆದ್ಯತೆ ಮೇರೆಗೆ ಹಣ ಕೊಡಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಸಕ್ಕರೆ ಕಾರ್ಖಾನೆ ಮಾಲಕರು ಒಟ್ಟಾರೆ 450 ಕೋಟಿ ರೂ.ಗಳನ್ನು ಪಾವತಿಸಬೇಕಿದೆ ಎಂದು ಕಬ್ಬು ಬೆಳೆಗಾರರು ತಿಳಿಸುತ್ತಿದ್ದಾರೆ. ಆದುದರಿಂದ, ಕಬ್ಬು ಬೆಳೆಗಾರರಿಗೆ ಯಾವ ಯಾವ ಕಾರ್ಖಾನೆಗಳಿಂದ ಎಷ್ಟು ಪ್ರಮಾಣದಲ್ಲಿ ಬಾಕಿ ಬರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಕಳೆದ ವರ್ಷ ನಿಗದಿ ಮಾಡಿದ್ದ ಎಫ್‌ಆರ್‌ಪಿ ದರ ಪ್ರಕಾರ ಕಾರ್ಖಾನೆ ಮಾಲಕರು ಎರಡು ಸಾವಿರ ಕೋಟಿ ರೂ.ಗಳನ್ನು ರೈತರಿಗೆ ನೀಡಬೇಕಿತ್ತು. ಈ ಪೈಕಿ ನಮ್ಮ ಸರಕಾರವು 1962 ಕೋಟಿ ರೂ.ಗಳನ್ನು ಕೊಡಿಸಿದ್ದು, ಇನ್ನು 38 ಕೋಟಿ ರೂ.ಗಳು ಬಾಕಿಯಿದೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ರಾಜ್ಯದಲ್ಲಿ ಕಳೆದ ಐದಾರು ವರ್ಷಗಳಿಂದ ಕೇಂದ್ರ ನಿಗದಿ ಮಾಡುವ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ಹಣ ನೀಡುವುದಾಗಿ ಕಾರ್ಖಾನೆ ಮಾಲಕರು ರೈತರ ಜೊತೆ ಮಾತಿನ ಒಡಂಬಡಿಕೆ ಮಾಡಿಕೊಂಡು ಹಣ ನೀಡುತ್ತಾ ಬಂದಿದ್ದಾರೆ. ಆದರೆ, ಕಳೆದ ವರ್ಷ ಮಾತ್ರ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ ಎಂದು ಅವರು ಹೇಳಿದರು.

ಇಂತಹ ಸಮಸ್ಯೆಗಳು ಮರುಕಳಿಸದಂತೆ ಹೊಸ ನಿಯಮಾವಳಿಗಳನ್ನು ರೂಪಿಸಲು ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಕಾನೂನನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದೇವೆ. ಸಕ್ಕರೆ ಕಾರ್ಖಾನೆ ಮಾಲಕರು ಉದ್ಧಟತನದಿಂದ ವರ್ತಿಸಲು ಸಾಧ್ಯವಿಲ್ಲ. ಕಳೆದ 7-8 ವರ್ಷಗಳಲ್ಲಿ ಕಬ್ಬು ಬೆಳೆಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುತ್ತೇವೆ ಎಂದು ಅವರು ಹೇಳಿದರು.

ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಎಚ್.ಡಿ.ರೇವಣ್ಣ, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ, ಕಬ್ಬು ಬೆಳೆಗಾರರ ಸಂಘದ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಇನ್ನಿತರೆಡೆ ಕಬ್ಬು ಬೆಳೆಗಾರರಿಗೆ ಯಾವ ಮಾದರಿಯಲ್ಲಿ ದರ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ತರಿಸಿಕೊಂಡು ನೋಡುತ್ತೇನೆ. ನಮ್ಮದೆ ಆದ ಮಾದರಿಯನ್ನು ಸಿದ್ಧಪಡಿಸಲಾಗುವುದು. ಮುಂದಿನ ವರ್ಷ ಕಬ್ಬು ಕಟಾವು ಮಾಡುವ ಸಂದರ್ಭ ಬಂದಾಗ, ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡದೆ ಇರುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಸರಕಾರ ಬದ್ಧವಾಗಿದೆ. ಬಿಜೆಪಿಯವರು ಮಾಡುವ ಪ್ರತಿಭಟನೆಗೆ ನನ್ನ ಸ್ವಾಗತವಿದೆ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News