ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಮತೀಯ ರಾಜಕಾರಣದ ಹುನ್ನಾರ!

Update: 2018-11-20 18:44 GMT

ಭಾಜಪ ಮತ್ತೊಮ್ಮೆ ಇತಿಹಾಸದ ಮೊರೆಹೋಗಿರುವಂತೆ ಕಾಣುತ್ತಿದೆ. ತೊಂಬತ್ತರ ದಶಕದಲ್ಲಿ ತೃತೀಯ ರಂಗದ ಮಂಡಲ್ ವರದಿಯ ಪರಿಣಾಮಗಳನ್ನು ಎದುರಿಸಲು ಭಾಜಪ ಕಮಂಡಲ್ ನೀತಿಯನ್ನು ಅನುಸರಿಸಿತ್ತು. ಅಂದಿನ ಭಾಜಪದ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರು ಬಾಬರಿ ಮಸೀದಿಯ ವಿವಾದವನ್ನು ಕೈಗೆತ್ತಿಕೊಂಡು ಅಯೋದ್ಯೆಯ ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರವನ್ನು ಕಟ್ಟಲು ಜನರಿಂದ ಇಟ್ಟಿಗೆ ಸಂಗ್ರಹಿಸುವ ರಥಯಾತ್ರೆಯನ್ನು ಭಾರತದಾದ್ಯಂತ ಹಮ್ಮಿಕೊಂಡಿದ್ದರು.

ಹಿಂದೂಗಳ ಭಾವನೆಗಳನ್ನು ಕೆರಳಿಸುವಂತಹ ಇಂತಹ ಯಾತ್ರೆಯ ಫಲವಾಗಿ 1991ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅದು ಕಾಂಗ್ರೆಸೇತರ ನ್ಯಾಶಬಲ್ ಫ್ರಂಟನ್ನು ಹಿಂದಿಕ್ಕಿ 120 ಸ್ಥಾನಗಳನ್ನು ಗೆದ್ದು ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಒಂದೆಡೆ ರಾಷ್ಟ್ರದಾದ್ಯಂತ ಗಟ್ಟಿಯಾಗಿ ಬೇರೂರಿದ್ದ ಕಾಂಗ್ರೆಸ್ ಪಕ್ಷ, ಇನ್ನೊಂದೆಡೆ ಕಾಂಗ್ರೆಸನ್ನು ವಿರೋಧಿಸಿ ಒಗ್ಗೂಡಿ ತಮ್ಮದೇ ಆದ ರಂಗವೊಂದನ್ನು ಸ್ಥಾಪಿಸಿಕೊಂಡ ಇತರ ಪಕ್ಷಗಳ ನ್ಯಾಶನಲ್ ಫ್ರಂಟ್! ಇವೆರಡರ ನಡುವೆ ಜನಬೆಂಬಲ ಗಳಿಸಲಾಗದೆ ಒದ್ದಾಡುತ್ತಿದ್ದ ಭಾಜಪಕ್ಕೆ ಉಳಿದಿದ್ದು ಒಂದೇ ಮಾರ್ಗ. ಬಹುಸಂಖ್ಯಾತ ಹಿಂದೂಗಳ ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ತನ್ಮೂಲಕ ಚುನಾವಣೆಗಳನ್ನು ಗೆಲ್ಲುವುದು ಮಾತ್ರ. ಹಾಗಾಗಿಯೇ ಅದು ಅಡ್ವಾಣಿಯವರ ನೇತೃತ್ವದಲ್ಲಿ ರಥಯಾತ್ರೆ ಪ್ರಾರಂಭಿಸಿ ಹಿಂದೂಮತಗಳ ಧ್ರುವೀಕರಣಕ್ಕೆ ಮುಂದಾಯಿತು. ಅದು ಸಂಪೂರ್ಣವಾಗಿ ಫಲ ನೀಡದಿದ್ದರೂ ನ್ಯಾಶನಲ್ ಫ್ರಂಟನ್ನು ಹಿಂದಿಕ್ಕಿ ಸುಮಾರು ನೂರಇಪ್ಪತ್ತು ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಯಿತು.

ಆ ಒಂದು ರಥಯಾತ್ರೆ ಭಾಜಪದ ಮತೀಯವಾದಿ ರಾಜಕಾರಣವನ್ನು ಜನತೆಯ ಮುಂದೆ ಅನಾವರಣ ಮಾಡಿದ್ದು ಮಾತ್ರವಲ್ಲದೆ, ಅದುವರೆಗೂ ಹಿನ್ನೆಲೆಯಲ್ಲಿ ನಿಂತು ಭಾಜಪವನ್ನು ನಿಯಂತ್ರಿಸುತ್ತಿದ್ದ ಸಂಘಪರಿವಾರದ ಸಂಸ್ಥೆಗಳು ನಿಸ್ಸಂಕೋಚವಾಗಿ ಭಾಜಪದ ಮತೀಯವಾದವನ್ನು ಬಹಿರಂಗವಾಗಿಯೇ ಬೆಂಬಲಿಸಲು ಪ್ರಾರಂಭಿಸಿದವು. ಇದರ ದೀರ್ಘ ಕಾಲೀನ ಪರಿಣಾಮವಾಗಿ 1999ರ ಚುನಾವಣೆಯಲ್ಲಿ ಭಾಜಪ 182 ಸ್ಥಾನಗಳನ್ನು ಗೆದ್ದು (ಕಾಂಗ್ರೆಸ್ 114) ತನ್ನ ಮಿತ್ರಪಕ್ಷಗಳ ಸಹಾಯದಿಂದ ಅಧಿಕಾರಕ್ಕೆ ಏರಿತು. ಭಾಜಪದ ಅಟಲ್ ಬಿಹಾರಿ ವಾಜಪೇಯಿಯವರು ಮೊದಲಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ವಿಶ್ವಾಸ ಮತಯಾಚನೆಯ ಸಂದರ್ಭದಲ್ಲಿ ಎಐಎಡಿಎಂಕೆ ಪಕ್ಷದ ಕುಮಾರಿ ಜಯಲಲಿತಾರವರ ಒಂದು ಮತದಿಂದಾಗಿ ವಾಜಪೇಯಿ ಅಧಿಕಾರ ಕಳೆದುಕೊಳ್ಳಬೇಕಾಯಿತು

ನಂತರ ನಡೆದ ಮತ್ತೊಂದು ಚುನಾವಣೆಯಲ್ಲಿ ಭಾಜಪ ನೇತೃತ್ವದ ಎನ್‌ಡಿಎ 269 ಸ್ಥಾನಗಳನ್ನು ಗೆದ್ದಿತು. ತೆಲುಗುದೇಶಂ ಪಕ್ಷದ 29ಸಂಸದರ ಬೆಂಬಲದೊಂದಿಗೆ ವಾಜಪೇಯಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 2004ರವರೆಗೂ ಆಡಳಿತ ನಡೆಸಿದರು. ಈ ಅವಧಿಯಲ್ಲಿ ಭಾಜಪದ ಹಿಂದುತ್ವದ ಅಜೆಂಡಾ ಹಿಂದಿನ ಸೀಟಿಗೆ ಹೋಯಿತು. ನಂತರ ನಡೆದ ಎರಡು ಚುನಾವಣೆಗಳಲ್ಲಿಯೂ ಯುಪಿಎ ಎದುರು ಎನ್‌ಡಿಎ ಸೋಲುಣ್ಣಬೇಕಾಯಿತು.

ಇದರಿಂದ ಹಿಂದೂ ಮತಗಳ ಧ್ರುವೀಕರಣವಾಗದೆ ತನಗೆ ಅಧಿಕಾರ ದೊರೆಯಲಾರದೆಂಬುದನ್ನು ಮನಗಂಡ ಸಂಘ ಪರಿವಾರ ಅದಾಗಲೇ ಗುಜರಾತಿನ ಮುಖ್ಯಮಂತ್ರಿಯಾಗಿ ಅತ್ಯುಗ್ರಹಿಂದುತ್ವದ ಪ್ರತಿಪಾದಕರೆನಿಸಿಕೊಂಡಿದ್ದ ನರೇಂದ್ರ ಮೋದಿಯವರನ್ನು 2014ರ ಚುನಾವಣೆಯಲ್ಲಿ ತನ್ನ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿತು. 2014ರ ಚುನಾವಣೆಯಲ್ಲಿ ಮತ್ತೆ ರಾಮಮಂದಿರ ನಿರ್ಮಾಣದ ಪ್ರಸ್ತಾಪ ಮಾಡುತ್ತ್ತಾ, ತಾವು ಅಧಿಕಾರಕ್ಕೆ ಬಂದರೆ ಮಂದಿರ ನಿರ್ಮಾಣದ ಆಶ್ವಾಸನೆ ನೀಡುವ ಪ್ರಚಾರ ಕೈಗೊಂಡ ಭಾಜಪ ನೆಪ ಮಾತ್ರಕ್ಕೆ ಮೋದಿಯವರ ಗುಜರಾತ್ ಮಾದರಿ ಅಭಿವೃದ್ಧಿಯ ಹುಸಿಯನ್ನು ಜನರಿಗೆ ಹಂಚುತ್ತಾ ಹೋಯಿತು.ಇದೆಲ್ಲದರ ಪರಿಣಾಮವಾಗಿ 2014ರಲ್ಲಿ ಭಾಜಪ ಸ್ವತಃ 282 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿದಿದ್ದು ಇದೀಗ ಇತಿಹಾಸ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರ ಸರಕಾರ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತ ನೋಟುಬ್ಯಾನ್‌ನಂತಹ ಜನವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತ ಬಂದಿದೆ. ಸಿರಿವಂತ ಉದ್ಯಮಿಗಳ ಪರವಾಗಿ ನಿಂತು ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿರೂಪಾಯಿಗಳ ನಷ್ಟಕ್ಕೆ ಕಾರಣವಾಗಿದೆ. ‘ಅಚ್ಛೇದಿನ್’ ತರುತ್ತೇವೆ ಎಂಬ ಅದರ ಘೋಷಣೆ ಕಾಗದದಲ್ಲೇ ಉಳಿದು ಹೋಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆಗಳು ಗಗನಕ್ಕೇರಿ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗುತ್ತಿದೆ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ.ಸರಕಾರದ ಆಡಳಿತದ ನೀತಿಗಳನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿಗಳ ಪಟ್ಟಕಟ್ಟಲಾಗುತ್ತಿದೆ. ವಿದೇಶಗಳನ್ನು ಸುತ್ತುತ್ತ ವಿಶ್ವಗುರು ಎಂಬ ಕೀರ್ತಿ ಗಳಿಸುತ್ತಿರುವ ಪ್ರಧಾನಿ ದೇಶದ ಆಂತರಿಕ ಆಡಳಿತದಲ್ಲಿ ವಿಫಲರಾಗಿದ್ದಾರೆ. ರಾಮಮಂದಿರದ ವಿಷಯ ಬಂದಾಗೆಲ್ಲ ಸುಪ್ರೀಂ ಕೋರ್ಟನ್ನು ತೋರಿಸುತ್ತಲೇ ಇಷ್ಟು ವರ್ಷಗಳನ್ನು ಕಳೆದಿದ್ದಾರೆ.

ಈ ನಡುವೆ ರಫೇಲ್ ವಿಮಾನ ಖರೀದಿಯ ಹಗರಣಗಳ ಮಾಹಿತಿ ಹೊರಬೀಳುತ್ತಿದ್ದಂತೆ ಅದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾಜಪ ಹೊಸ ಕಸರತ್ತು ಶುರು ಮಾಡಿದೆ. ಕಳೆದ ತಿಂಗಳು ಸುಪ್ರೀಂಕೋರ್ಟ್ ರಾಮಜನ್ಮಭೂಮಿ ವಿವಾದದ ತೀರ್ಪನ್ನು ಅವಸರದಲ್ಲಿ ನೀಡಲು ಸಾಧ್ಯವಿಲ್ಲವೆಂದು ಹೇಳಿದಾಗ ಆಡಳಿತ ಪಕ್ಷವಾಗಿ ಅದನ್ನು ಒಪ್ಪಿಕೊಂಡ ಭಾಜಪ ತನ್ನ ಎರಡನೇ ಹಂತದ ನಾಯಕರ ಮತ್ತು ಸಂಘ ಪರಿವಾರದವರ ಮೂಲಕ ಸುಗ್ರೀವಾಜ್ಞೆಯ ಮಾತುಗಳನ್ನು ಆಡಿಸುತ್ತಿದೆ. 2019ರ ಮೇ ತಿಂಗಳ ಒಳಗೆ ರಾಮಮಂದಿರದ ಶಂಕುಸ್ಥಾಪನೆ ನೆರವೇರಿದರೆ ತನಗೆ ಚುನಾವಣೆಯಲ್ಲಿ ಲಾಭವಾಗುತ್ತದೆಯೆಂಬ ದೃಷ್ಟಿಯಿಂದ ಭಾಜಪ ಈ ವಿಚಾರದ ಚರ್ಚೆಯನ್ನು ಮುಂಚೂಣಿಗೆ ತರಲು ಮುಂದಾಗಿದೆ. ಇನ್ನು ರಾಮಮಂದಿರದ ವಿಷಯ ಉತ್ತರ ಭಾರತದಲ್ಲಿ ಕೆಲಸ ಮಾಡಿದಷ್ಟು ಪರಿಣಾಮಕಾರಿಯಾಗಿ ದಕ್ಷಿಣದಲ್ಲಿ ಮಾಡುವುದು ಕಷ್ಟ. ಭಾಜಪದ ಅದೃಷ್ಟವೆಂಬಂತೆ ಅದಕ್ಕೆ ದಕ್ಷಿಣದಲ್ಲಿಯೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅದನ್ನು ಮತಗಳನ್ನಾಗಿ ಪರಿವರ್ತಿಸುವ ಅವಕಾಶವೊಂದು ಸಿಕ್ಕಿದೆ.

ಅದುವೇ ಶಬರಿಮಲೆಗೆ ಮಹಿಳೆಯರ ಮುಕ್ತ ಪ್ರವೇಶದ ವಿಚಾರ! ಇತ್ತೀಚೆಗೆ ಸುಪ್ರೀಂ ಕೋರ್ಟ ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡಬೇಕೆಂದು ತೀರ್ಪು ನೀಡಿದಾಕ್ಷಣ ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ ಭಾಜಪ ತನ್ನ ಪರವಾಗಿರುವ ಹಲವು ಸಂಘಟನೆಗಳ ಮೂಲಕ ಇದನ್ನು ಪ್ರತಿಭಟಿಸಿ ರ್ಯಾಲಿ, ಧರಣಿಗಳನ್ನು ಹಮ್ಮಿಕೊಳ್ಳಲು ಪ್ರಾರಂಭಿಸಿತು. ತೀರ್ಪು ಬಂದು ತಿಂಗಳೇ ಕಳೆದರೂ ಇದುವರೆಗೂ ಒಬ್ಬಳೇ ಒಬ್ಬ ಮಹಿಳೆಯೂ ದೇಗುಲ ಪ್ರವೇಶಿಸಿದಂತೆ ತಡೆಯುವಲ್ಲಿ ಹಿಂದೂ ಸಂಘಟನೆಗಳು ಪ್ರತಿರೋಧ ಒಡ್ಡುತ್ತಲೇ ಇವೆ. ದರ್ಶನಕ್ಕೆ ಬಂದ ಮಹಿಳೆಯರನ್ನು ಬಲವಂತವಾಗಿ ವಾಪಾಸು ಕಳಿಸುತ್ತಾ ಶಬರಿಮಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯೊಂದು ನಿರ್ಮಾಣವಾಗುವಂತೆ ಮಾಡಿವೆ. ಸುಪ್ರೀಂ ತೀರ್ಪನ್ನು ಜಾರಿಗೊಳಿಸುವ ಹೊಣೆಹೊತ್ತಿರುವ ಎಡರಂಗದ ಸರಕಾರ ಹಿಂದೂ ವಿರೋಧಿ ಸರಕಾರವೆಂಬ ಭಾವನೆ ಜನರಲ್ಲಿ ಮೂಡಿಸಿ ಮುಂದಿನ ಚುನಾವಣೆಗಳ ಹೊತ್ತಿಗೆ ರಾಜಕೀಯ ಲಾಭ ಪಡೆಯುವ ಹುನ್ನಾರದಲ್ಲಿ ಭಾಜಪ ತೊಡಗಿಸಿಕೊಂಡಿದೆ, ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದರೆ ಅದರ ಉದ್ದೇಶ ಸ್ಪಷ್ಟ: ಉತ್ತರಕ್ಕೆ ರಾಮ, ದಕ್ಷಿಣಕ್ಕೆ ಅಯ್ಯಪ್ಪ! ಮೊದಲೇ ಬಲಪಂಥೀಯ ಶಕ್ತಿಗಳ ಜೊತೆ ಕೈ ಜೋಡಿಸಿರುವ ಬಹುತೇಕ ಮಾಧ್ಯಮಗಳು ಸಹ ಬೆಲೆ ಏರಿಕೆ, ರಫೇಲ್ ಹಗರಣ ಮುಂತಾದವುಗಳ ಬಗ್ಗೆ ಮಾತಾಡುವುದನ್ನು ನಿಲ್ಲಿಸಿ ರಾಮಮಂದಿರ, ಶಬರಿಮಲೆಗಳ ಸುತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತಿವೆ.

Writer - ಕು.ಸ.ಮಧುಸೂದನ ನಾಯರ್

contributor

Editor - ಕು.ಸ.ಮಧುಸೂದನ ನಾಯರ್

contributor

Similar News