ಮನೋಹರ್ ಪಾರಿಕ್ಕರ್ ರಾಜೀನಾಮೆಗೆ 48 ಗಂಟೆ ಗಡುವು

Update: 2018-11-21 04:25 GMT

ಪಣಜಿ, ನ.21: ತೀವ್ರ ಅಸ್ವಸ್ಥರಾದರೂ ಗೋವಾ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದಿರುವ ಮನೋಹರ ಪಾರಿಕ್ಕರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಂಗಳವಾರ ಸಂಜೆ ಹಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ನೂರಾರು ಮಂದಿ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ ಪಾದಯಾತ್ರೆ ನಡೆಸಿದರು. ಪಾರಿಕ್ಕರ್ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ಸ್ಥಾನದಲ್ಲಿ ಪೂರ್ಣಾವಧಿ ಮುಖ್ಯಮಂತ್ರಿ ಬೇಕು ಎನ್ನುವುದು ಪ್ರತಿಭಟನಾಕಾರರ ಬೇಡಿಕೆ.

'ಆಡಳಿತದ ಪುನಃ ಪ್ರತಿಷ್ಠಾಪನೆಗಾಗಿ ಜನರ ಪಾದಯಾತ್ರೆ' ಎಂಬ ಬ್ಯಾನರ್‌ನಡಿ ಸುಮಾರು ಒಂದು ಕಿಲೋಮೀಟರ್ ಪಾದಯಾತ್ರೆ ನಡೆಸಿ, ಪಾರಿಕ್ಕರ್ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದರು. ಈ ಪಾದಯಾತ್ರೆಗೆ ಕಾಂಗ್ರೆಸ್ ಹೊರತುಪಡಿಸಿ, ಎನ್‌ಸಿಪಿ ಹಾಗೂ ಶಿವಸೇನೆ ಕೂಡಾ ಬೆಂಬಲ ಸೂಚಿಸಿದ್ದವು. ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ಪಾದಯಾತ್ರೆ ಆಯೋಜಿಸಿದ್ದವು.

ಪಾರಿಕ್ಕರ್ ತೀವ್ರ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಂಬತ್ತು ತಿಂಗಳಿಂದ ಪಾರಿಕ್ಕರ್ ಅಸ್ವಸ್ಥರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಡೀ ಸರ್ಕಾರಿಯಂತ್ರ ನಿಷ್ಕ್ರಿಯವಾಗಿದೆ ಎಂದು ಆಪಾದಿಸಿದರು.

ಪಾರಿಕ್ಕರ್ ನಿವಾಸದಿಂದ 100 ಮೀಟರ್ ದೂರದಲ್ಲೇ ಪೊಲೀಸರು ಪಾದಯಾತ್ರೆಯನ್ನು ತಡೆದರು. ಅನಾರೋಗ್ಯ ಕಾರಣದಿಂದ ಸಿಎಂ ನಿಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಿಎಂ ರಾಜೀನಾಮೆಗೆ ಬಹಿರಂಗ ಗಡುವು ವಿಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News