ಬೆಂಗಳೂರು: ಎಲ್ಲೆಡೆ ಸಂಭ್ರಮದ ಮೀಲಾದುನ್ನಬಿ ಆಚರಣೆ

Update: 2018-11-21 16:17 GMT

ಬೆಂಗಳೂರು, ನ.21: ಪ್ರವಾದಿ ಮುಹಮ್ಮದ್ ಮುಸ್ತಫ (ಸ) ಅವರ ಜನ್ಮದಿನದ ಪ್ರಯುಕ್ತ ರಾಜಧಾನಿ ಬೆಂಗಳೂರಿನ ಎಲ್ಲೆಡೆ ಸಂಭ್ರಮದ ಮೀಲಾದುನ್ನಬಿ ಆಚರಿಸಲಾಯಿತು.

ಬುಧವಾರ ಇಲ್ಲಿನ ತಿಲಕ್‌ನಗರ, ಜಯನಗರ, ಬನಶಂಕರಿ, ಯಾರಬ್ ನಗರ, ಬಿಟಿಎಂ ಲೇಔಟ್, ಆರ್‌ನಗರ, ಶಿವಾಜಿನಗರ, ಚಾಮರಾಜಪೇಟೆ, ವಿಜಯನಗರ ಸೇರಿದಂತೆ ಎಲ್ಲೆಡೆ ಮುಸ್ಲಿಮ್ ಬಾಂಧವರು ಪ್ರವಾದಿ ಮುಹಮ್ಮದ್‌ (ಸ)ರ ಸಂದೇಶಗಳು, ಪವಿತ್ರ ಮಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಸಿದ್ದು, ವಿಶೇಷವಾಗಿತ್ತು. ಮಸೀದಿಗಳೆಲ್ಲ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕಾರಗೊಂಡು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು. ಅದೇ ರೀತಿ, ಗಗನ ಚುಂಬಿಗಳಂತೆ ಭಾಸವಾಗುವ ಮಿನಾರ್‌ಗಳಿಗೂ ವಿದ್ಯುದ್ದೀಪಗಳ ಅಲಂಕಾರದಿಂದ ಬಣ್ಣದ ಲೋಕವೇ ಸೃಷ್ಟಿ ಆಗಿತ್ತು.

ಮೆರವಣಿಗೆ: ನಗರದ ವೈಎಂಸಿಎ ಮೈದಾನದಲ್ಲಿ ಜುಲೂಸೆ ಮುಹಮ್ಮದೀಯ ಸಮಿತಿ ಸೇರಿದಂತೆ ಇನ್ನಿತರೆ ಸಂಘಟನೆಗಳ ನೇತೃತ್ವದಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ವಿವಿಧ ಪ್ರದೇಶಗಳಿಂದ ಮುಸ್ಲಿಮ್ ಬಾಂಧವರು ಪ್ರವಾದಿ ಮುಹಮ್ಮದ್‌ (ಸ)ರ ಸಂದೇಶಗಳು, ಪವಿತ್ರ ಮಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರಗಳ ಮೆರವಣಿಗೆ ಮೂಲಕ ವೈಎಂಸಿಎ ಮೈದಾನಕ್ಕೆ ತಲುಪಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬಿಗಿ ಬಂದೋಬಸ್ತ್: ಮೀಲಾದುನ್ನಬಿ ಸಂಭ್ರಮದ ಮೆರವಣಿಗೆ ಸೇರಿದಂತೆ ಇನ್ನಿತರೆ ಹಬ್ಬದ ಚಟುವಟಿಕೆಗಳ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸಂಚಾರ ದಟ್ಟಣೆ ಸಮಸ್ಯೆ ಉಂಟಾಗದಂತೆಯೂ ವಿವಿಧ ಭಾಗಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಕ್ರಮ ಕೈಗೊಳ್ಳಲಾಗಿತ್ತು.

ಮದ್ಯ ಮಾರಾಟ ಬಂದ್: ನಗರದ ಪೂರ್ವ ವಿಭಾಗದ ಕೆಜಿ ಹಳ್ಳಿ, ಹೆಣ್ಣೂರು, ಡಿಜೆಹಳ್ಳಿ, ಪುಲಿಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಮತ್ತು ಭಾರತೀನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಿಲಾದ್ದುನ್ನಬಿ ಪ್ರಯುಕ್ತ ಬುಧವಾರ ಮಧ್ಯಾಹ್ನದಿಂದ ಮೆರವಣಿಗೆ ಆರಂಭವಾದ ಹಿನ್ನೆಲೆಯಲ್ಲಿ ದಿನಪೂರ್ತಿ ಮದ್ಯ ಮಾರಾಟ ಬಂದ್‌ಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News