ಮುಸ್ಲಿಮರನ್ನು ಚುನಾವಣಾ ಪ್ರಕ್ರಿಯೆಯಿಂದ ದೂರವಿಡುವ ಹುನ್ನಾರ: ಪಿಎಫ್‌ಐ

Update: 2018-11-21 14:29 GMT

ಬೆಂಗಳೂರು, ನ.21: ರಾಜ್ಯದಲ್ಲಿ 2017-18ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ ಸಲ್ಲಿಸಲಾದ ಅರ್ಜಿಗಳಲ್ಲಿ ಹೆಚ್ಚಿನದಾಗಿ ಮುಸ್ಲಿಮ್ ಹೆಸರಿನ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಆ ಮೂಲಕ ಚುನಾವಣಾ ಪ್ರಕ್ರಿಯೆಯಿಂದ ಮುಸ್ಲಿಮರನ್ನು ದೂರವಿಡುವ ಹುನ್ನಾರ ನಡೆಯುತ್ತಿದೆ ಎಂದು ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ 2017-18ರ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ 2.8 ಲಕ್ಷ ಅರ್ಜಿಗಳಲ್ಲಿ ಶೇ.20ರಷ್ಟು ವಿದೇಶಿ ಪೌರರೆಂದು ಆರೋಪಿಸಲಾಗಿದೆ. ಅದರಲ್ಲಿ ಮುಸ್ಲಿಮರ ಹೆಸರೆ ಹೆಚ್ಚಾಗಿ ಕಂಡು ಬಂದಿರುವುದು, ಪೂರ್ವಗ್ರಹ ಪೀಡಿತ ಲಕ್ಷಣವಾಗಿದೆ. ಅರ್ಜಿದಾರ ಕುಟುಂಬಗಳಿಗೆ ತಮ್ಮ ಅರ್ಜಿ ತಿರಸ್ಕರಿಸಲ್ಪಟ್ಟ ಕುರಿತಾಗಲಿ, ಯಾವ ಕಾರಣಕ್ಕಾಗಿ ಅರ್ಜಿ ತಿರಸ್ಕರಿಸಲಾಗಿದೆ ಎಂಬ ಮಾಹಿತಿ ಕೊಟ್ಟಿಲ್ಲ ಹಾಗೂ ಅನರ್ಹತೆಯನ್ನು ಪ್ರಶ್ನಿಸಲು ಅವರಿಗೆ ಅವಕಾಶವನ್ನೇ ನೀಡಲಾಗಿಲ್ಲ. ಆಧಾರ್, ವಿದ್ಯುತ್ ಬಿಲ್, ಶಾಲಾ ಪ್ರಮಾಣ ಪತ್ರಗಳಿದ್ದ ಹೊರತಾಗಿಯೂ ವಿದೇಶೀ ಪ್ರಜೆಗಳೆಂಬ ಶಂಕೆಯಲ್ಲಿ ಅವರನ್ನು ಮತದಾರರ ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂಬ ಮಾಹಿತಿಯನ್ನು ಸಂಶೋಧನೆ ಬಹಿರಂಗಪಡಿಸಿದೆ. ಅಗತ್ಯ ದಾಖಲೆಗಳಿದ್ದು ಕೂಡ ಅವರಿಗೆ ವಿದೇಶೀ ಪ್ರಜೆಗಳೆಂದು ಸುಳ್ಳು ಹಣೆಪಟ್ಟಿ ಕಟ್ಟಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ ಎಂದು ಅವರು ವಿಷಾದಿಸಿದರು.

ನಿವತ್ತ ಐಎಎಸ್ ಅಧಿಕಾರಿಗಳಾದ ಡಾ.ಅಬೂ ಸಾಲಿಹ್ ಶರೀಫ್, ಸಯ್ಯದ್ ಝಮೀರ್ ಪಾಶಾ ಮತ್ತು ಪ್ರೊ.ಮೊಹ್ಸಿನ್ ಆಲಂ ಭಟ್‌ರನ್ನೊಳಗೊಂಡ ತಂಡದ ಸಾಮಾಜಿಕ ಕಳಕಳಿಯು ಪ್ರಶಂಸಾರ್ಹವಾದದ್ದು. ಈ ಸಂಶೋಧನಾ ತಂಡದ ವರದಿಯು ದೇಶದಲ್ಲಿ ಮುಸ್ಲಿಮರನ್ನು ರಾಜಕೀಯದಿಂದ ದೂರಡಲು ನಡೆಸುವ ಅಮೂರ್ತ ಪ್ರಯತ್ನಗಳನ್ನು ತೆರೆದಿಟ್ಟಿದೆ. ಆಡಳಿತ ವ್ಯವಸ್ಥೆಯು ಕೂಡಲೇ ಮಧ್ಯ ಪ್ರವೇಶಿಸಿ, 1960 ಮತದಾರರ ನಿಯಮಾವಳಿಗಳ ನೋಂದಣಿಯಡಿ ಒದಗಿಸಲಾದ ವ್ಯಾಪಕ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ ನಾಗರಿಕರ ಮತದಾನದ ಹಕ್ಕನ್ನು ಖಾತರಿಪಡಿಸಬೇಕು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಮುಹಮ್ಮದ್ ಶಾಕಿಬ್ ಆಗ್ರಹಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News