ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಿಂದ ರೈತ ಮೋರ್ಚಾ ಅಧ್ಯಕ್ಷರೇ ದೂರ !

Update: 2018-11-21 14:37 GMT
 ಲಕ್ಷ್ಮಣ್ ಸವದಿ

ಬೆಂಗಳೂರು, ನ. 21: ರೈತ ಮಹಿಳೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆಂದು ಆರೋಪಿಸಿ ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಿಂದ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಸವದಿಯವರೇ ದೂರ ಉಳಿದಿರುವುದು ಪಕ್ಷದಲ್ಲೇ ಆಕ್ಷೇಪಕ್ಕೆ ಕಾರಣವಾಗಿದೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದರೂ, ನಗರದ ಬಹುತೇಕ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ಅತ್ತ ಬೆಳಗಾವಿಯಲ್ಲಿ ನಾಮಕಾವಸ್ತೆಗೆ ಪ್ರತಿಭಟನೆ ನಡೆಸಿದರೂ, ಮಾಜಿ ಶಾಸಕ ಸಂಜಯ್ ಪಾಟೀಲ್ ಹೊರತುಪಡಿಸಿ ಯಾವೊಬ್ಬ ಮುಖಂಡರೂ ಅತ್ತ ಸುಳಿಯಲಿಲ್ಲ.

ಅತ್ಯಂತ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿರುವ ಚಿಕ್ಕೋಡಿಯಲ್ಲಿ ಬಿಜೆಪಿ ಪ್ರತಿಭಟನೆಯನ್ನೇ ನಡೆಸಲಿಲ್ಲ. ಇಲ್ಲಿನ 15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಪೈಕಿ 7-8 ಸಕ್ಕರೆ ಕಾರ್ಖಾನೆಗಳ ಮಾಲಕರು ಬಿಜೆಪಿ ಮುಖಂಡರೇ ಆಗಿದ್ದಾರೆಂಬುದು ಗಮನಾರ್ಹ.

‘ರಾಜ್ಯದಲ್ಲಿನ ಮೈತ್ರಿ ಸರಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ನಾಯಕರ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಸವದಿ ನಿನ್ನೆ ಎಚ್ಚರಿಕೆ ನೀಡಿದ್ದರು. ಇದೀಗ ಅವರೇ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ.

ಹಸಿರು ಶಾಲು ಬಳಕೆಗೆ ಆಕ್ಷೇಪ

‘ಬಿಜೆಪಿ ರೈತರ ಪ್ರತಿಭಟನೆ ಹೈಜಾಕ್ ಮಾಡಲು ಹೊರಟಿರುವುದು ಸರಿಯಲ್ಲ. ಅವರು ರೈತರ ಹೋರಾಟಕ್ಕೆ ಬೆಂಬಲ ನೀಡಲು ನಮ್ಮ ಆಕ್ಷೇಪವಿಲ್ಲ. ಆದರೆ, ಪ್ರತಿಭಟನೆ ನೆಪದಲ್ಲಿ ಹಸಿರು ಟವಲ್ ಬಳಕೆ ಮಾಡಬಾರದು. ಬೇಕಿದ್ದರೆ ಕೇಸರಿ ಟವಲ್ ಬಳಸಲಿ.’

-ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News