ಭತ್ತೆ ಪಡೆದ ಆರೋಪ: ವಿಧಾನ ಪರಿಷತ್ ಸದಸ್ಯರ ವಿರುದ್ಧ ಎಫ್‌ಐಆರ್

Update: 2018-11-21 14:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.21: ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆಗಳನ್ನು ಪಡೆಯುವ ಮೂಲಕ ಸರಕಾರಕ್ಕೆ ವಂಚಿಸಿದ್ದ ಆರೋಪದಡಿ ವಿಧಾನ ಪರಿಷತ್ತಿನ 7 ಹಾಲಿ ಸದಸ್ಯರು ಹಾಗೂ ಓರ್ವ ಮಾಜಿ ಸದಸ್ಯರ ವಿರುದ್ಧ ಇಲ್ಲಿನ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ.

ವಿಧಾನ ಸದಸ್ಯರ ವಿರುದ್ಧ ರಾಯಚೂರಿನ ಆರ್.ಜೆ.ಎಚ್. ರಾಮಣ್ಣ ಎಂಬುವರು ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸೂಕ್ತ ರೀತಿ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವಿಧಾನಸೌಧ ಪೊಲೀಸರಿಗೆ ನಿರ್ದೇಶಿಸಿದೆ.

ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಪರಿಷತ್ತಿನ ಸದಸ್ಯರಾದ ಎಸ್.ರವಿ, ರಘು ಆಚಾರ್, ಆರ್.ಬಿ.ತಿಮ್ಮಾಪೂರ, ಎನ್.ಎಸ್.ಬೋಸರಾಜು, ಅಲ್ಲಂ ವೀರಭದ್ರಪ್ಪ, ಜೆಡಿಎಸ್ ಎನ್.ಅಪ್ಪಾಜಿಗೌಡ. ಸಿ.ಆರ್.ಮನೋಹರ್ ಹಾಗೂ ಎಂ.ಡಿ.ಲಕ್ಷ್ಮೀನಾರಾಯನ್(ಮಾಜಿ ಸದಸ್ಯ) ವಿರುದ್ಧ ವಂಚನೆ (ಐಪಿಸಿ 420), ಸರಕಾರಕ್ಕೆ ತಪ್ಪು ಮಾಹಿತಿ ನೀಡುವುದು (177), ಅಪರಾಧದ ಉದ್ದೇಶದಿಂದ ಗುಂಪುಗೂಡುವುದು (149) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯಡಿ ಎಫ್‌ಐಆರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News