ಕುಮಾರಸ್ವಾಮಿ ರಾಜ್ಯ ಕಂಡ ಅತ್ಯಂತ ಬೇಜವಾಬ್ದಾರಿ ಮುಖ್ಯಮಂತ್ರಿ: ಯಡಿಯೂರಪ್ಪ

Update: 2018-11-21 16:14 GMT

ಬೆಂಗಳೂರು, ನ.21: ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಂಡ ಅತ್ಯಂತ ಬೇಜವಾಬ್ದಾರಿ ಮುಖ್ಯಮಂತ್ರಿ. ರೈತರ ಸಮಸ್ಯೆಗಳಿಗೆ ಸ್ಪಂದಿಸದೆ, ಸುಳ್ಳು ಭರವಸೆಗಳನ್ನು ಕೊಟ್ಟು ಅವರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದಾರೆ.

ಇವತ್ತಿನ ಅವರ ಹೇಳಿಕೆಗಳು ಜನ ಸಮೂಹಕ್ಕೆ ಅಪಮಾನ ಮಾಡುವುದಲ್ಲದೇ, ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ತಾನು ಏನು ಮಾಡುತ್ತಿದ್ದೇನೆ ಎನ್ನುವುದರ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

‘ನನಗೂ ಖಾಸಗಿ ಜೀವನ ಇದೆ, ಕಡತಗಳನ್ನು ಪರಿಶೀಲಿಸಲು ಏಕಾಂತ ಬೇಕು. ಆದುದರಿಂದ, ತಾಜ್‌ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ರೂಮ್ ಮಾಡಿದ್ದೀನಿ’ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಹೀಗೆ ಹೇಳುವ ಮೂಲಕ ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯರಿಗೆ ಅವಮಾನ ಮಾಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧ ರಾಜ್ಯಕ್ಕೆ ದೇಗುಲವಿದ್ದಂತೆ, ಹಿಂದೆ ಎಲ್ಲ ಮುಖ್ಯಮಂತ್ರಿಗಳು ಅಲ್ಲಿಂದಲೇ ಆಡಳಿತ ನಡೆಸಿ, ಅದರ ಪ್ರಾಮುಖ್ಯತೆ ಕಾಪಾಡಿದ್ದಾರೆ. ಒಂದು ಕಡೆ ಸರಕಾರ ದುಡ್ಡು ಉಳಿಸಲು ನಾನು ಸರಕಾರಿ ಕಾರು ಉಪಯೋಗ ಮಾಡುವುದಿಲ್ಲ ಅಂತೀರಿ. ಇನ್ನೊಂದು ಕಡೆ ಲಕ್ಷಗಟ್ಟಲೆ ಕಾರು, ರೂಮಿನ ಮೇಲೆ ಖರ್ಚು ಮಾಡುತ್ತೀರಿ ಎಂದು ಅವರು ದೂರಿದ್ದಾರೆ.

ಖಾಸಗಿ ಜೀವನ ಬಯಸುವವರು ಇನ್ನೊಂದೆಡೆ ಮುಖ್ಯಮಂತ್ರಿಯಾಗಿ ಸಾರ್ವಜನಿಕ ಜೀವನ ಹೇಗೆ ನಡೆಸುತ್ತೀರಿ? ನಿಮ್ಮ ನಡೆ ನುಡಿಯಲ್ಲಿ ಸಾಮ್ಯತೆ ಇಲ್ಲ. ಅದಕ್ಕೆ ನೀವೇ ಉತ್ತರ ಕೊಡಬೇಕು. ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನೊಂದು ಭಯ ನಮಗೆ ಎಂದರೆ, ಈಗಾಗಲೇ ಬಹಳಷ್ಟು ಮಂತ್ರಿಗಳು ತಮ್ಮ ತಮ್ಮ ಖಾಸಗಿ ಸ್ಥಳಗಳಿಂದ ಸರಕಾರ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬೀಗ ಹಾಕುವ ಸಂಭವ ಬಂದರೂ ಬರಬಹುದು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News