ಸಹೋದರತೆ-ಶಾಂತಿಯ ಮತ್ತೊಂದು ಹೆಸರೇ ಇಸ್ಲಾಮ್: ದಿನೇಶ್ ಗುಂಡೂರಾವ್

Update: 2018-11-21 16:30 GMT

ಬೆಂಗಳೂರು, ನ.21: ಭ್ರಾತೃತ್ವ, ಸಹೋದರತೆ, ಕರುಣೆ ಹಾಗೂ ಶಾಂತಿಯ ಇನ್ನೊಂದು ಹೆಸರೇ ಇಸ್ಲಾಮ್ ಧರ್ಮ. ಪ್ರವಾದಿ ಮುಹಮ್ಮದ್(ಸ) ಬೋಧಿಸಿದ ತತ್ವ, ಸಂದೇಶಗಳು ಮಾನವ ಕುಲಕ್ಕೆ ಮಾರ್ಗದರ್ಶಕ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಬುಧವಾರ ನಗರದ ವೈಎಂಸಿಎ ಮೈದಾನದಲ್ಲಿ ಜುಲೂಸೆ ಮುಹಮ್ಮದೀಯ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ‘ಮೀಲಾದುನ್ನಬಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್(ಸ) ಜನ್ಮದಿನವನ್ನು ವಿಶ್ವದೆಲ್ಲೆಡೆ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.

ಬಹು ಧರ್ಮ, ಬಹು ಭಾಷೆ ಹಾಗೂ ಬಹು ಸಂಸ್ಕೃತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಸರ್ವ ಧರ್ಮೀಯರು ಪರಸ್ಪರ ಸೌಹಾರ್ದತೆ, ಪ್ರೀತಿ, ವಿಶ್ವಾಸದಿಂದ ಬಾಳುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವಂತಹ ಶಕ್ತಿಗಳು ಪ್ರಬಲವಾಗಿ ಬೆಳೆಯುತ್ತಿವೆ. ಅವರ ವಿರುದ್ಧ ನಾವೆಲ್ಲ ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಒಂದು ಧರ್ಮವನ್ನು ಅನುಸರಿಸುವವರು ಮತ್ತೊಂದು ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು. ಒಂದು ಧರ್ಮದ ಸಂಸ್ಕೃತಿಯನ್ನು ಮತ್ತೊಬ್ಬರ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸಿದರೆ, ಸಮಾಜದಲ್ಲಿ ಸಂಘರ್ಷ ಉಂಟಾಗುತ್ತದೆ ಎಂದು ಅವರು ತಿಳಿಸಿದರು. ಯಾವ ಧರ್ಮವೂ ಹಿಂಸೆ, ಅಶಾಂತಿಯನ್ನು ಬೋಧಿಸುವುದಿಲ್ಲ. ಆದರೂ, ವಿಶ್ವದೆಲ್ಲೆಡೆ ರಾಜಕೀಯ ಸೇರಿದಂತೆ ಅನೇಕ ಕಾರಣಗಳಿಗಾಗಿ ದ್ವೇಷ ಹೆಚ್ಚುತ್ತಿದೆ. ಸಮಾಜವನ್ನು ಬೇರ್ಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ನಾವೆಲ್ಲ ಎಚ್ಚರಿಕೆಯಿಂದ ಇರಬೇಕಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಆರ್.ರೋಷನ್‌ ಬೇಗ್, ಎನ್.ಹಾರೀಸ್, ಜುಲೂಸೆ ಮುಹಮ್ಮದೀಯ ಕಾರ್ಯದರ್ಶಿ ಅಫ್ಸರ್‌ ಬೇಗ್, ಏಜಾಝ್ ಅಹ್ಮದ್ ಖುರೇಷಿ, ಜಾಮೀಯಾ ಬಿಲಾಲ್ ಅಧ್ಯಕ್ಷ ಅಮೀರ್‌ ಜಾನ್‌ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಚಾರ ದಟ್ಟಣೆ, ಜನರ ಪರದಾಟ

ಮೀಲಾದುನ್ನಬಿ ಅಂಗವಾಗಿ ನಗರದ ಕೆ.ಆರ್.ಮಾರುಕಟ್ಟೆ, ಮಾಗಡಿ ರಸ್ತೆ, ಹೆಬ್ಬಾಳ, ಆರ್.ಟಿ.ನಗರ, ಮುನಿರೆಡ್ಡಿ ಪಾಳ್ಯ, ಗೋರಿಪಾಳ್ಯ, ಮೈಸೂರು ರಸ್ತೆ, ಜಯನಗರ, ಕೋರಮಂಗಲ, ಜಾನ್ಸನ್ ಮಾರ್ಕೆಟ್, ಕಲಾಸಿಪಾಳ್ಯ, ಚಿಕ್ಕಪೇಟೆ, ಶಿವಾಜಿನಗರ, ಟ್ಯಾನರಿ ರಸ್ತೆ. ನಾಗವಾರ, ಹಲಸೂರು, ಇಂದಿರಾನಗರ, ದರ್ಗಾ ಮೊಹಲ್ಲಾ, ಜಯನಗರ, ತಿಲಕ್‌ನಗರ, ಬಿಸ್ಮಿಲ್ಲಾ ನಗರ, ಕೆ.ಆರ್.ಪುರ ಸೇರಿದಂತೆ ವಿವಿಧ ಪ್ರದೇಶಗಳಿಂದ ಮುಸ್ಲಿಮ್ ಬಾಂಧವರು ಪವಿತ್ರ ಮಕ್ಕಾ, ಮದೀನಾ, ಅಜ್ಮೀರ್ ಹಾಗೂ ಹಾಜಿ ಅಲಿ ದರ್ಗಾಗಳ ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ನಡೆಸಿದರು.

ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ನಡೆಯುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲದೆ, ರಸ್ತೆಗಳಲ್ಲಿ ಸಂಚಾರವನ್ನು ಮಾರ್ಪಾಡು ಮಾಡಲಾಗಿತ್ತು. ಮೆರವಣಿಗೆಯಿಂದಾಗಿ ಪುರಭವನ, ಬಿಬಿಎಂಪಿ ಕಚೇರಿ, ಹಡ್ಸನ್ ವೃತ್ತ, ಜೆ.ಸಿ.ರಸ್ತೆ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಜನಸಾಮಾನ್ಯರು ಪರದಾಡುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News