ಸಂಬೋಳಿ ಆತ್ಮಕಥೆ ಪಠ್ಯಪುಸ್ತಕವಾಗಬೇಕು: ಡಾ.ವಸುಂಧರಾ ಭೂಪತಿ

Update: 2018-11-21 16:50 GMT

ಬೆಂಗಳೂರು, ನ.21: ದಲಿತ ಚಳವಳಿ ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಣ್ ಅವರ ಆಥ್ಮಕತೆ ‘ಸಂಬೋಳಿ’ಯನ್ನು ಪಠ್ಯಪುಸ್ತಕವಾಗಿ ಅಳವಡಿಸಬೇಕು ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿದ್ದಾರೆ.

ಬುಧವಾರ ನಗರದ ಕಸಾಪದಲ್ಲಿ ಸಂಬೋಳಿ ಪ್ರಕಾಶನ ಹಾಗೂ ನಿಯೋಗಿ ಪ್ರಕಾಶನಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರೊ.ಸುಶೀಲಾ ಪುನೀತಾ ಅವರು ಅನುವಾದಿಸಿರುವ ಲಕ್ಷ್ಮಣ್ ಅವರ ಆತ್ಮಕಥೆ ‘ಸಂಬೋಳಿ’ ಇಂಗ್ಲಿಷ್ ಆವೃತಿ ಹಾಗೂ ಜೈಭೀಮ್ ಲಕ್ಷ್ಮಣ್ ಸಂಪಾದಿಸಿರುವ ‘ಜನತೆಯ ಸಂಗಾತಿ ಲಕ್ಷ್ಮಣ್‌ಜಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಲ್ಲ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಲಕ್ಷ್ಮಣ್ ಅವರು ಅಪಾರವಾದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಅವರ ಆತ್ಮಕಥೆಯಲ್ಲಿ ಹೇಳಲಾಗಿದೆ ಎಂದ ಅವರು, ಲಕ್ಷ್ಮಣ್‌ರ ಸಂಬೋಳಿ ಆತ್ಮಕಥೆಯಲ್ಲಿನ ‘ಅಮರ ಪೇಮ’ ಅಧ್ಯಾಯವು ಆಕ್ಸ್‌ರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಅದೇ ರೀತಿ ನಮ್ಮಲ್ಲೂ ಕೆಲವು ಅಧ್ಯಾಯಗಳು ಪಠ್ಯವಾಗಬೇಕು. ಈ ನಿಟ್ಟಿನಲ್ಲಿ ಸರಕಾರಕ್ಕೆ ಹಾಗೂ ಪಠ್ಯಪುಸ್ತಕ ಆಯ್ಕೆ ಸಮಿತಿಗೆ ಮನವಿ ಮಾಡಲಾಗುವುದು ಎಂದರು.

ಅನುವಾದಿತ ‘ಸಂಬೋಳಿ’ ಕೃತಿಯು ದಲಿತ ಸಂಸ್ಕೃತಿಯ ಭಾಗವಾಗಿದೆ. ಅನುವಾದಕರು ಮೂಲಕ್ಕೆ ಧಕ್ಕೆಯಾಗದಂತೆ ಅನುವಾದಿಸಿದ್ದು, ಕನ್ನಡದ ಹಲವು ಪದಗಳನ್ನು ಉಳಿಸಿಕೊಂಡಿದ್ದಾರೆ. ಕನ್ನಡದ ಆತ್ಮಕಥೆಗಳು ಬೇರೆ ಭಾಷೆಗಳಲ್ಲಿ ಬರುವುದು ತುಂಬಾ ವಿರಳ. ಹೀಗಿರುವಾಗ ಲಕ್ಷ್ಮಣ್ ಅವರ ಕೃತಿ ಇಂಗ್ಲಿಷ್‌ಗೆ ತರ್ಜುಮೆಗೊಂಡಿರುವುದು ಸಂತಸದ ಸಂಗತಿ ಎಂದು ವಸುಂಧರಾ ಭೂಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡದ ಅನೇಕ ಆತ್ಮಕಥೆಗಳು ಇಂಗ್ಲಿಷ್ ಸೇರಿದಂತೆ ಬೇರೆ ಭಾಷೆಯ ಜನರಿಗೆ ತಲುಪುತ್ತಿಲ್ಲ. ಒಂದು ವೇಳೆ ಕನ್ನಡದ ಕೃತಿಗಳು ಇಂಗ್ಲಿಷ್‌ನಲ್ಲಿ ದೊರಕಿದರೆ ಕನ್ನಡದ ಅಸ್ಮಿತೆ ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತದೆ. ಈ ನಿಟ್ಟಿನಲ್ಲಿ ಲಕ್ಷ್ಮಣ್ ಅವರ ಕೃತಿ ಭಾಷಾಂತರವಾಗಿರುವುದು ಒಳ್ಳೆಯ ಸಂಗತಿಯಾಗಿದ್ದು, ಈ ಕೃತಿಯು ಇಂಗ್ಲಿಷ್‌ನಲ್ಲಿ ದಲಿತ ಅಸ್ಮಿತೆಯ ಕೃತಿಯಾಗಲಿದೆ ಎಂದು ಹೇಳಿದರು.

ಪತ್ರಕರ್ತ ಪಾರ್ವತೀಶ ಬಿಳಿದಾಳೆ ಮಾತನಾಡಿ, ರಾಜ್ಯದ ದಮನಿತರ ಮೇಲಿನ ಶೋಷಣೆ, ಅನ್ಯಾಯ, ದಬ್ಬಾಳಿಕೆ ದೌರ್ಜನ್ಯಗಳನ್ನು ಕಂಡ ಕೂಡಲೇ ಅಲ್ಲಿ ಅದರ ವಿರುದ್ಧ ಮಾತನಾಡುತ್ತಿದ್ದ ವ್ಯಕ್ತಿ ಲಕ್ಷ್ಮಣ್. ಎಲ್ಲರೊಂದಿಗೂ ಸಾಮಾನ್ಯ ಮನುಷ್ಯನಂತೆ ಬೆರೆಯುತ್ತಿದ್ದ ಅಪರೂಪದ ಹೋರಾಟಗಾರರಾಗಿದ್ದರು ಎಂದು ಹೇಳಿದರು.

ಲಕ್ಷ್ಮಣ್ ಅವರು ಸಿದ್ಧಾಂತಗಳ ಹೊರಗೆ ನಿಂತು ಸಮಾನತೆಯ ಆಶಯಗಳಿಗಾಗಿ ಕೆಲಸ ಮಾಡಿದ, ನ್ಯಾಯಕ್ಕಾಗಿ ಚಳವಳಿ ಕಟ್ಟಿದ ಸಂಗಾತಿಯಾಗಿದ್ದಾರೆ. ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ, ಗಾಂಧಿ, ಬಸವ, ಬುದ್ಧ ವಾದಗಳೊಂದಿಗೂ, ರೈತ, ದಲಿತ, ದಮನಿತರ ಎಲ್ಲರ ಆಶಯಗಳನ್ನು ಒಳಗೊಂಡಿದ್ದ ಅಪರೂಪದ ವ್ಯಕ್ತಿಯಾಗಿದ್ದಾರೆ. ಸಿದ್ಧಾಂತ, ತರ್ಕ, ಮಿತಿಗಳನ್ನು ಮೀರಿ ಕರ್ನಾಟಕ ರೂಪಿಸಬೇಕು ಎಂದು ಹೋರಾಡಿದವರಾಗಿದ್ದಾರೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಲೇಖಕಿ ಪ್ರೊ. ಸುಶೀಲಾ ಪುನೀತಾ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಸಮಾಜ ವಿಜ್ಞಾನಿ ಡಾ. ಸಿ.ಜಿ. ಲಕ್ಷ್ಮೀಪತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತುಂಬಾ ಸೂಕ್ಷ್ಮವಾದ ಬರವಣಿಗೆಯನ್ನು ಹೊಂದಿರುವ ‘ಸಂಬೋಳಿ’ ಅತ್ಯುತ್ತಮ ಕೃತಿಯಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಕೃತಿಗಳು ಹೊರಬರುವುದು ತುಂಬಾ ಮುಖ್ಯ.

-ನಿರ್ಮಲ್ ಕಾಂತಿ ಭಟ್ಟಾಚಾರ್ಯ, ನಿಯೋಗಿ ಪ್ರಕಾಶನ, ದಿಲ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News