ರೈತರ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸಲು ಸಿಎಂ ಕುಮಾರಸ್ವಾಮಿಗೆ ದೇವೇಗೌಡರ ಸಲಹೆ

Update: 2018-11-21 16:51 GMT

ಬೆಂಗಳೂರು, ನ. 21: ರೈತರ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸುವ ಮೂಲಕ, ಯಾವುದೇ ರೀತಿಯ ವಿವಾದಗಳಿಗೂ ಅವಕಾಶ ನೀಡದೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ ಮಾಡಿದ್ದಾರೆ.

ಬುಧವಾರ ಇಲ್ಲಿನ ಪದ್ಮನಾಭನಗರದಲ್ಲಿ ದೇವೇಗೌಡ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ರೈತರ ಪ್ರತಿಭಟನೆ ಸಂಬಂಧ ಸಮಾಲೋಚನೆ ನಡೆಸಿದ್ದು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವಂತೆ ಗೌಡರು ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.

ಕಬ್ಬು ಬೆಳೆಗಾರರ ಬಾಕಿ ಹಣವನ್ನು ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ನಿಗದಿತ ಕಾಲಮಿತಿ ನೀಡಿ, ಬೆಳಗಾವಿಯಲ್ಲಿ ಡಿಸೆಂಬರ್ 10ರಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನವೇ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ದೇವೇಗೌಡ ನಿರ್ದೇಶನ ನೀಡಿದ್ದಾರೆಂದು ತಿಳಿದು ಬಂದಿದೆ.

ಸಾರ್ವಜನಿಕ ಸಮಾರಂಭಗಳಲ್ಲಿ ರೈತರ ಬಗ್ಗೆ ಮಾತನಾಡುವ ವೇಳೆ ಸೂಕ್ತ ಎಚ್ಚರ ವಹಿಸಿ ಎಂದು ಸೂಚಿಸಿರುವ ದೇವೇಗೌಡ, ಅಧಿವೇಶನದ ಸಂದರ್ಭದಲ್ಲಿ ರೈತರು ಪ್ರತಿಭಟನೆ ತೀವ್ರಗೊಳಿಸುವ ಸಾಧ್ಯತೆಗಳಿವೆ. ಅಲ್ಲದೆ, ವಿಪಕ್ಷ ಬಿಜೆಪಿ ಇದೇ ವಿಚಾರವನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಹೀಗಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News