ಈರುಳ್ಳಿ ದರ ದಿಢೀರ್ ಕುಸಿತ: ರಸ್ತೆಗೆ ಸುರಿದು ರೈತರ ಆಕ್ರೋಶ

Update: 2018-11-21 16:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.21: ಒಂದೆಡೆ ಸಕ್ಕರೆ ಕಾರ್ಖಾನೆ ಮಾಲಕರು ಕಬ್ಬಿನ ಬಾಕಿ ಹಣ ಸಂದಾಯ ಮಾಡುತ್ತಿಲ್ಲ ಎಂದು ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಈರುಳ್ಳಿ ದರ ದಿಢೀರ್ ಕುಸಿದು ನೆಲ ಕಚ್ಚಿದೆ ಎಂದು ಬೆಳೆಗಾರರು ಈರುಳ್ಳಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳವಾರವಷ್ಟೇ ಸಿಎಂ ಕುಮಾರಸ್ವಾಮಿ ಅವರು ಕಬ್ಬು ಬೆಳೆದ ರೈತರು ಹಾಗೂ ಮಾಲಕರ ಸಭೆ ಕರೆದು ರಾಜಿ ಸಂಧಾನ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಮಾಲಕರು ರೈತರ ಬೇಡಿಕೆಗಳಿಗೆ ಒಪ್ಪದೆ ಒಂದೇ ಬಾರಿ ಬಾಕಿ ಹಣವನ್ನು ಕೊಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದರು. ಸಿಎಂ ನಡೆಸಿದ ಸಭೆ ವಿಫಲವಾಗಿ ರೈತರು ಬರಿಗೈಯಲ್ಲಿ ಹಿಂತಿರುಗಿದ್ದರು.

ಈ ಹೋರಾಟದ ನಡುವೆಯೇ ಈರುಳ್ಳಿ ಬೆಲೆ ದಿಢೀರ್ ಕುಸಿತಗೊಂಡಿದೆ ಎಂದು ಈರುಳ್ಳಿ ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈರುಳ್ಳಿ ಕೆ.ಜಿ.ಗೆ ಕೇವಲ ಒಂದು ರೂಪಾಯಿ ಆಗಿದೆ. ಈರುಳ್ಳಿ ಬೆಳೆಯುವುದರಲ್ಲಿ ಕರ್ನಾಟಕವೇ ಮೊದಲನೇ ಸ್ಥಾನದಲ್ಲಿದೆ. ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಚಿತ್ರದುರ್ಗ, ಬಿಜಾಪುರ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಹೆಚ್ಚಾಗಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ. ರೈತರು ತಮ್ಮ ಜೀವನಾಧಾರವಾಗಿ ಈ ಬೆಳೆಯನ್ನೇ ನಂಬಿಕೊಂಡಿದ್ದಾರೆ.

ಎಪಿಎಂಸಿ ಮಾರುಕಟ್ಟೆಗಳಲ್ಲಿ ವಾರದ ಹಿಂದೆ ಒಂದು ಕ್ವಿಂಟಾಲ್ ಈರುಳ್ಳಿಗೆ 500 ರೂ. ಇದ್ದದ್ದು, ಈಗ 200 ರೂ.ಗೆ ಬಂದು ಕುಸಿದಿದೆ. ಇದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಪ್ರತಿ 50 ಕೆ.ಜಿ ಚೀಲವೊಂದಕ್ಕೆ 25, 30, 50 ರೂ. ಬೆಲೆ ಕುಸಿತ ಕಂಡಿದೆ. 800 ರೂ. ನಿಂದ 1600 ರೂ.ವರೆಗೆ ಇದ್ದ ಈರುಳ್ಳಿ ಬೆಲೆ ಏಕಾಏಕಿ 150 ರಿಂದ 200 ರೂ.ಗೆ ಕುಸಿತ ಕಂಡಿದೆ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ.

ಸಾವಿರಾರು ರೂಪಾಯಿ ಖರ್ಚು ಮಾಡಿ, ಬೆವರು ಸುರಿಸಿ ಈರುಳ್ಳಿ ಬೆಳೆದಿದ್ದೇವೆ. ಹೀಗಾಗಿ, ಸರಿಯಾದ ಬೆಲೆ ನಿಗದಿ ಮಾಡಿ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದರಲ್ಲಿ ದಳ್ಳಾಳಿಗಳ ಕುತಂತ್ರವಿದ್ದು, ಅವರು ಉದ್ದೇಶಪೂರ್ವಕವಾಗಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಹಾಗೂ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಈರುಳ್ಳಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆ ಕುಸಿತ ಕಂಡಿದೆ. ಕರ್ನಾಟಕವು ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ರಫ್ತು ಮಾಡುತ್ತಿತ್ತು. ಆದರೆ ತಮಿಳುನಾಡಿನಲ್ಲಿ ಗಜ ಚಂಡಮಾರುತ ಅಪ್ಪಳಿಸಿದ್ದರಿಂದ ಟ್ರಕ್‌ಗಳ ಸಂಚಾರ ಸ್ಥಗಿತವಾಯಿತು. ಹೀಗಾಗಿ ಈರುಳ್ಳಿ ದರ ಕುಸಿಯಲು ಕಾರಣವಾಯಿತು ಎನ್ನಲಾಗಿದೆ. ಜೊತೆಗೆ ರೈತರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಹಾಗೂ ದಾಸ್ತಾನು ಸೌಲಭ್ಯದ ಕೊರತೆಯೂ ಸಹ ಈರುಳ್ಳಿ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News