ವಿಶ್ವಕರ್ಮ ಸಮುದಾಯವನ್ನು ಮರೆಯಲು ಅಸಾಧ್ಯ: ಸಂಸದ ಪಿ.ಸಿ.ಮೋಹನ್

Update: 2018-11-21 17:06 GMT

ಬೆಂಗಳೂರು, ನ.21: ವಿಶ್ವಕ್ಕೆ ಅದ್ಭುತವಾದ ಕಲೆಗಳನ್ನು ಪರಿಚಯಿಸಿರುವ ವಿಶ್ವಕರ್ಮ ಸಮುದಾಯವನ್ನು ಮರೆಯಲು ಅಸಾಧ್ಯ. ಅವರಿಂದಲೇ ನಾವಿಂದು ಮೂರ್ತಿಗಳಲ್ಲಿ ದೇವರುಗಳನ್ನು ಕಾಣಲು ಸಾಧ್ಯವಾಗಿದೆ ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು.

ಬುಧವಾರ ನಗರದ ಶಿಕ್ಷಕರ ಸದನದಲ್ಲಿ ವಿಶ್ವಕರ್ಮ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಸಹಯೋಗದೊಂದಿಗೆ ಚಿನ್ನ-ಬೆಳ್ಳಿ ಕುಶಲಕರ್ಮಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವಕರ್ಮ ಸಮುದಾಯವು ಶ್ರಮವಹಿಸಿ ದುಡಿದು ವಿಶಿಷ್ಟವಾದ ಕಲೆಗಳನ್ನು ಪರಿಚಯ ಮಾಡಿಸುತ್ತಿದ್ದಾರೆ. ಪ್ರಪಂಚದ ಎಲ್ಲ ಕಡೆ ಹಲವಾರು ಮೂರ್ತಿಗಳ ಪೂಜೆ ನಡೆಸುತ್ತೇವೆ. ಅದರಲ್ಲಿ ಬಹುತೇಕ ವಿಶ್ವಕರ್ಮ ಸಮುದಾಯದ ಕೊಡುಗೆಯಾಗಿದೆ. ಅದೇ ಸಮುದಾಯದ ಪರಂಪರೆಯನ್ನು ಉಳಿಸಿಕೊಳ್ಳಬೇಕು ಹಾಗೂ ತಮ್ಮ ನಡುವೆ ಇರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಅದಕ್ಕಾಗಿ ಸರಕಾರಿ ಯೋಜನೆಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶ್ವದಲ್ಲಿ ಜನಮನ್ನಣೆ ಗಳಿಸುವಂತೆ ಶಿಲ್ಪಕಲೆಗಳನ್ನು ನೀಡಿರುವ ವಿಶ್ವಕರ್ಮ ಸಮುದಾಯ ಇಂದು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಕುಲ ಕಸುಬುಗಳಿಗೆ ಬೆಲೆಯಿಲ್ಲದಾಗಿದೆ ಎಂದ ಅವರು, ಹಿಂದುಳಿದ ಸಮುದಾಯಗಳು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಯೋಜನೆ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಅನೇಕ ವಲಯಗಳಲ್ಲಿ ಸಹಾಯ ಮಾಡಲಿದೆ ಎಂದು ನುಡಿದರು.

ಪರಿಶಿಷ್ಟರಿಗೆ ಇರುವ ರೀತಿಯಲ್ಲಿಯೇ ಹಿಂದುಳಿದ ಸಮುದಾಯಗಳಿಗೂ ಸಾಂವಿಧಾನಿಕ ಮಾನ್ಯತೆ ಸಿಕ್ಕಿದೆ. ಹೀಗಾಗಿ, ಹಿಂದುಳಿದಿರುವ ಸಮುದಾಯಗಳು ಸಮಾಜದ ಮುನ್ನೆಲೆಗೆ ಬರಬೇಕು ಹಾಗೂ ಹಿಂದುಳಿದವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಶಾಸಕ ಉದಯ ಗರುಡಾಚಾರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 32 ಲಕ್ಷ ಜನಸಂಖ್ಯೆಯಿರುವ ವಿಶ್ವಕರ್ಮ ಸಮುದಾಯದ ಸಣ್ಣ ವ್ಯಾಪಾರಿಗಳಿಗೆ, ಸಾಲ-ಸೌಲಭ್ಯ ದೊರೆಯುತ್ತಿಲ್ಲ. ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ. ಅಲ್ಲದೆ, ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುತ್ತೇನೆ ಎಂದರು.

ಪೊಲೀಸರ ಕಾಟ: ವಿಶ್ವಕರ್ಮ ಸಮುದಾಯದ ಚಿನ್ನಾಭರಣ ಅಂಗಡಿ ಮಾಲಕರು, ಹಳೆಯ ಚಿನ್ನ, ಬೆಳ್ಳಿ ಖರೀದಿಸಲು ಮುಂದಾದಾಗ, ಪೊಲೀಸರು ಬಹಳ ಕಿರುಕುಳ ನೀಡುತ್ತಿರುವ ದೂರುಗಳು ಬರುತ್ತಿವೆ. ಈ ಸಂಬಂಧ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗರುಡಾಚಾರ್ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ನಂದಿ ಗ್ರಾಮದ ಜ್ಞಾನಾನಂದ ಆಶ್ರಮದ ಶಿವಾತ್ಮಾನಂದ ಸರಸ್ಪತಿ ಸ್ವಾಮೀಜಿ, ಮಧುರೈ ಗೋಲ್ಡ್ ಸ್ಮಿತ್ ಅಕಾಡೆಮಿ ಅಧ್ಯಕ್ಷ ತಿರುಪತಿ ರಾಜನ್, ಸೇವಾ ಸಮಿತಿ ಅಧ್ಯಕ್ಷ ಆರ್.ಮಧುಸೂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News