×
Ad

ಬೀದಿ ಬದಿ ವ್ಯಾಪಾರಿಗಳು ಉದ್ಯಮಿಗಳಾಗಿ ಬೆಳೆಯಲಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-11-22 17:53 IST

ಬೆಂಗಳೂರು, ನ.22: ರಾಜ್ಯ ಸರಕಾರ ಬಡವರ ಬಂಧು ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಹಂತ, ಹಂತವಾಗಿ ಉದ್ಯಮಿಗಳಾಗಿ ಬೆಳೆಯಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಶಿಸಿದರು.

ಗುರುವಾರ ಸಹಕಾರ ಇಲಾಖೆ ನಗರದ ಯಶವಂತಪುರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ‘ಬಡವರ ಬಂಧು’ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕೆ ಲೇವಾದೇವಿಗಾರರ ಮೇಲೆ ಅವಲಂಬಿತರಾಗಿ, ಅಧಿಕ ಬಡ್ಡಿ ಕಟ್ಟುತ್ತಿದ್ದಾರೆ. ಹೀಗಾಗಿ ಬಡ್ಡಿ ದಂಧೆಯಿಂದ ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಬಡವರ ಬಂಧು ಯೋಜನೆ ಪ್ರಾರಂಭಿಸಿದ್ದೇವೆ ಎಂದರು.

ಇನ್‌ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಹಾಗೂ ಸ್ನೇಹಿತರು ಕೇವಲ 10ಸಾವಿರ ರೂ.ನಿಂದ ತಮ್ಮ ಉದ್ಯಮವನ್ನು ಪ್ರಾರಂಭಿಸಿ, ಇಂದು ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವಷ್ಟು ಬೆಳೆದು ನಿಂತಿದ್ದಾರೆ. ಇದೇ ಮಾದರಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ದುಡಿಮೆಯ ಹಣವನ್ನು ಸ್ವಲ್ಪ ಸ್ವಲ್ಪವೆ ಕ್ರೋಡೀಕರಿಸಿ, ಉದ್ಯಮವಾಗಿ ಬೆಳೆಯಲಿ ಎಂದು ಅವರು ತಿಳಿಸಿದರು.

ಕಿರುಕುಳ ಕೊಡಬೇಡಿ: ಬೀದಿ ಬದಿ ವ್ಯಾಪಾರಿಗಳು ಬೆಳಗ್ಗೆಯಿಂದ ಸಂಜೆವರಿಗೆ ದುಡಿದರೂ ತೃಪ್ತಿಕರವಾಗಿ ಜೀವನ ನಡೆಸಲು ಸಾಧ್ಯವಾಗುವಷ್ಟು ಹಣ ಸಂಪಾದನೆ ಆಗುವುದಿಲ್ಲ. ಹೀಗಾಗಿ ಯಾವುದೆ ಕಾರಣಕ್ಕೂ ಪೊಲೀಸರು, ಅಧಿಕಾರಿಗಳು ಅವರ ಬಳಿ ಹಣ ವಸೂಲಿ ಕೃತ್ಯಕ್ಕೆ ಕೈಹಾಕಿ ಕಿರುಕುಳ ಕೊಡಬಾರದು. ಬೀದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬಡವರ ಬಂಧು ಯೋಜನೆಯನ್ನು ಜಾರಿ ಮಾಡಿದೆ. ಅಧಿಕಾರಿಗಳು ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.

ಮಧುಗಿರಿಯಲ್ಲಿ ಹೂ ಮಾರುವ ಮಹಿಳೆಯೊಬ್ಬರು ತಮ್ಮ ಸಣ್ಣ ಪ್ರಮಾಣದ ದುಡಿಮೆಯಲ್ಲೆ, ತನ್ನ ಮಗನನ್ನು ಐಎಎಸ್ ಓದಿಸಿದ್ದರು. ಹೀಗಾಗಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.

ಬಡವರ ಬಂಧು ಯೋಜನೆಯಡಿ 53ಸಾವಿರ ಜನರಿಗೆ ಪ್ರಾರಂಭದಲ್ಲಿ ಸಾಲ ನೀಡಿ, ಹಂತಹಂತವಾಗಿ ಎಲ್ಲರಿಗೂ ಕೊಡುವ ಕೆಲಸ ಮಾಡಲಾಗುತ್ತದೆ. ಸಮ್ಮಿಶ್ರ ಸರಕಾರದ ಬಗ್ಗೆ ವಿರೋಧ ಪಕ್ಷ ವಿನಾಕಾರಣ ಟೀಕೆ ಮಾಡುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಉತ್ತಮ ಆಡಳಿತ ನೀಡುವತ್ತ ನಮ್ಮ ಸರಕಾರ ಹೊರಟಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಕೆ.ಗೋಪಾಲಯ್ಯ, ಮುನಿರತ್ನ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾದೇವಿ, ಬಿಬಿಎಂಪಿ ಸದಸ್ಯರು, ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯಾಂಶಗಳು

-ರಾಜ್ಯದಲ್ಲಿ 4.5ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಬೆಂಗಳೂರಿನಲ್ಲಿ 80ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಪ್ರಾರಂಭಿಕವಾಗಿ ರಾಜ್ಯದ ಸುಮಾರು 53ಸಾವಿರ ಮಂದಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ.

-ಪ್ರತಿ ಬೀದಿ ಬದಿ ವ್ಯಾಪಾರಿಗಳಿಗೆ 2ಸಾವಿರ ರೂ.ನಿಂದ 10ಸಾವಿರ ರೂ. ಸಾಲ ನೀಡಲಾಗುತ್ತದೆ.

-ಸಾಲ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್, ರಾಜಾಜಿನಗರ ಕೋ.ಅಪರೇಟಿವ್ ಬ್ಯಾಂಕ್, ವಿಶ್ವೇಶ್ವರಯ್ಯ ಕೋ-ಅಪರೇಟಿವ್ ಬ್ಯಾಂಕ್, ಗುರುರಾಘವೇಂದ್ರ ಕೋ-ಅಪರೇಟಿವ್ ಬ್ಯಾಂಕ್ ಸೇರಿದಂತೆ ಮತ್ತಿತರ ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ.

-ಸಾಲದ ಮರು ಪಾವತಿಯ ಅವಧಿ ಮೂರು ತಿಂಗಳಾಗಿದ್ದು, ಅವಧಿಯೊಳಗೆ ಸಾಲ ಮರು ಪಾವತಿ ಮಾಡಿದರೆ ಮತ್ತೆ ಸಾಲ ದೊರೆಯಲಿದೆ. ಜತೆಗೆ ಶೇ.10 ರಷ್ಟು ಹೆಚ್ಚು ಸಾಲ ಒದಗಿಸಿ ಸಾಲದ ಮೊತ್ತವನ್ನು 15 ಸಾವಿರಕ್ಕೆ ಹೆಚ್ಚಿಸಲು ಸಹ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News