ಬೆಂಗಳೂರು: ಐವರು ದರೋಡೆ ಯತ್ನ ಆರೋಪಿಗಳ ಬಂಧನ
ಬೆಂಗಳೂರು, ನ.22: ಪರವಾನಿಗೆ ಇಲ್ಲದೆ ಅಕ್ರಮವಾಗಿ ನಾಡ ಪಿಸ್ತೂಲ್ ಇಟ್ಟುಕೊಂಡು ಹಾಗೂ ಶಸ್ತ್ರಾಸ್ತ್ರಗಳನ್ನು ತೋರಿಸಿ ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ದಾರಿ ಹೋಕರನ್ನು ಅಡ್ಡಗಟ್ಟಿ ಹೆದರಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಹದೇವಪುರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಂಡಿದ್ದ ಆರೋಪಿ ಶಿವರಾಜ್(28), ತನ್ನ ಸಹಚರರಾದ ಮಂಜುನಾಥ್(24), ಶಿವಶಂಕರ್(20), ಸಂತೋಷ್ ಯಾನೆ 420(25) ಹಾಗೂ ದೇವರಾಜ್(28) ಎಂಬುವವರೊಂದಿಗೆ ನ.20ರಂದು ರಾತ್ರಿ 10 ಗಂಟೆ ಸಮಯದಲ್ಲಿ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನೆಕ್ಕುಂದಿ ಕಡೆಯಿಂದ ಮಾರತ್ತಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಹದೇವಪುರ ಠಾಣೆಯ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಆರೋಪಿಗಳ ವಶದಲ್ಲಿದ್ದ ಅಕ್ರಮ ನಾಡ ಪಿಸ್ತೂಲ್, 3 ಜೀವಂತ ಗುಂಡುಗಳು, ಒಂದು ಸ್ಕೋಡಾ ಕಾರು, ಎರಡು ಲಾಂಗ್, ಒಂದು ಡ್ರಾಗರ್, ಮೂರು ಮೊಬೈಲ್ ಫೋನ್‌ಗಳು ಮತ್ತು ಒಂದು ಖಾರದ ಪುಡಿ ಪೊಟ್ಟಣಗಳ ಸಮೇತ ಎಚ್‌ಎಎಲ್ ಪೊಲೀಸ್ ಠಾಣೆಯ ಅಧಿಕಾರಿಗಳ ವಶಕ್ಕೆ ನೀಡಿ ದೂರು ನೀಡಿದರು. ಈ ಸಂಬಂಧ ಎಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.