ಬೆಂಗಳೂರು: ಮಾರ್ಯಾದ ಹತ್ಯೆ ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಧರಣಿ
ಬೆಂಗಳೂರು, ನ. 22: ಅಂತರ್ ಜಾತಿ ವಿವಾಹವಾಗಿದ್ದ ನವ ದಂಪತಿ ನಂದೀಶ್ ಮತ್ತು ಸ್ವಾತಿಯನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಬಿಡುಗಡೆ ಚಿರತೆಗಳು(ವಿಸಿಕೆ) ಸಂಘಟನೆ ವತಿಯಿಂದ ಇಲ್ಲಿನ ಪುರಭವನದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಗುರುವಾರ ಪುರಭವನದ ಮುಂಭಾಗದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಸಂಘಟನೆ ಪ್ರಧಾನ ಕಾರ್ಯದರ್ಶಿ ವಿ.ಮೂರ್ತಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಂತರ್‌ಜಾತಿ ವಿವಾಹಿತರಿಗೆ ರಕ್ಷಣೆಯೇ ಇಲ್ಲ ಎಂದು ದೂರಿದರು.
ಹತ್ಯೆಗೈಯುವ ಉದ್ದೇಶದಿಂದಲೇ ದಂಪತಿಯನ್ನು ಕಾರಿನಲ್ಲಿ ಅಪಹರಿಸಿದ್ದು, ಅತ್ಯಂತ ಭೀಕರ ರೀತಿಯಲ್ಲಿ ಹತ್ಯೆಗೈದು, ಕಾವೇರಿ ನದಿಗೆ ಎಸೆದಿದ್ದಾರೆ. ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದು, ಉಳಿದೆಲ್ಲ ಆರೋಪಿಗಳನ್ನು ಬಂಧಿಸಬೇಕು. ಅಂತರ್‌ಜಾತಿ ಮತ್ತು ಪ್ರೇಮ ವಿವಾಹವಾದ ದಂಪತಿಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು.
ದಲಿತ ಯುವ ನಂದೀಶ್ ಕುಟುಂಬಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿಗಳಾದ ಎಂ.ಎಸ್.ಶೇಖರ್, ರಿಯಾಝ್ ಪಾಲ್ಗೊಂಡಿದ್ದರು.