ರಾಹುಲ್‌ ಗಾಂಧಿ ಸೂಚನೆಯಂತೆ ಸಂಪುಟ ವಿಸ್ತರಣೆ: ಡಾ.ಜಿ.ಪರಮೇಶ್ವರ್

Update: 2018-11-22 13:58 GMT

ಬೆಂಗಳೂರು, ನ.22: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆಯಂತೆ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಲಾಗುವುದು. ಈ ತಿಂಗಳಲ್ಲೆ ಸಂಪುಟ ವಿಸ್ತರಣೆಯಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಗುರುವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಚರ್ಚಿಸಲಾಗಿದೆ. ಅವರು ರಾಹುಲ್‌ ಗಾಂಧಿ ಜೊತೆ ಚರ್ಚಿಸಿದ ಬಳಿಕ ನಮಗೆ ತಿಳಿಸುತ್ತಾರೆ ಎಂದರು.

ರಾಹುಲ್‌ ಗಾಂಧಿ ಪಂಚರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದಾಗಿ, ರಾಹುಲ್‌ ಗಾಂಧಿ ಹಾಗೂ ವೇಣುಗೋಪಾಲ್ ನಡುವೆ ಚರ್ಚೆ ನಡೆದಿಲ್ಲ. ರಾಹುಲ್‌ ಗಾಂಧಿ ಅನುಮತಿ ನೀಡಿದರೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಪರಮೇಶ್ವರ್ ಹೇಳಿದರು.

ಶಾಸಕ ಎನ್.ಎ.ಹಾರೀಸ್ ಪುತ್ರ ಮುಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌ಗೆ ಕೆಲವರು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ತನಗೆ ಮಾಹಿತಿಯಿಲ್ಲ. ಸಿಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತೇನೆ ಎಂದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಲಿನ ಮತದಾರರು ನಮ್ಮ ಅಭ್ಯರ್ಥಿ ವಿ.ಎಸ್.ಉಗ್ರಪ್ಪರನ್ನು ಭಾರಿ ಅಂತರದಲ್ಲಿ ಗೆಲ್ಲಿಸಿದ್ದಾರೆ. ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಮಾರಂಭವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News