ಸರೋಜಿನಿ ಮಹಿಷಿ ವರದಿ ಶೀಘ್ರ ಜಾರಿಯಾಗಲಿ: ಡಾ.ವಸುಂಧರಾ ಭೂಪತಿ

Update: 2018-11-22 14:00 GMT

ಬೆಂಗಳೂರು, ನ.22: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸರೋಜಿಶಿ ಮಹಿಷಿ ಅವರ ವರದಿಯನ್ನು ಕೂಡಲೇ ರಾಜ್ಯ ಸರಕಾರ ಜಾರಿ ಮಾಡಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಒತ್ತಾಯಿಸಿದ್ದಾರೆ.

ಗುರುವಾರ ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 63 ನೆ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರಿ ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಅದರ ಜತೆಗೆ ಕನ್ನಡದಲ್ಲಿ ಅಧ್ಯಯನ ಮಾಡಿದರೆ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಸಿಗುತ್ತದೆ ಎಂಬ ಭರವಸೆಯನ್ನು ಪೋಷಕರಲ್ಲಿ ಮೂಡಿಸುವಂತಾಗಬೇಕು ಎಂದು ಹೇಳಿದರು.

ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭವಾಗಬೇಕು. ಅದರ ಜತೆಗೆ, ಕನ್ನಡ ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಹಾಗೂ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವುದು ಕಡ್ಡಾಯ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡವು ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಭಾಷೆಯನ್ನಾಗಿ ಮಾಡಿ ಕಾಗದಗಳ ಮೇಲೆ ಇಡುವ ಬದಲಿಗೆ, ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು ಕನ್ನಡ ಮಾತನಾಡುವುದನ್ನು, ಬಳಕೆ ಮಾಡುವುದರ ಬಗ್ಗೆ ಇಚ್ಛಾಶಕ್ತಿಯನ್ನು ತೋರಬೇಕು. ಆ ಮೂಲಕ ಕನ್ನಡವನ್ನು ಉಳಿಸಿ-ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ಏಕೀಕರಣಗೊಂಡು 63 ವರ್ಷಗಳಾಗುತ್ತಿದೆ. ಹಿರಿಯ ಸಾಹಿತಿಗಳು, ಕಲಾವಿದರು, ಹೋರಾಟಗಾರರು ಕನ್ನಡ ಭಾಷೆಗಾಗಿ ಹೋರಾಡಿದವರ ತ್ಯಾಗದಿಂದಾಗಿ ರಾಜ್ಯ ಏಕೀಕರಣ ಕಂಡಿದೆ. ಆದರೆ, ಇಂದು ಅದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೆ, ನಾಡನ್ನು ಕಟ್ಟುವ ಬದಲಿಗೆ, ಕೆಡವಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಗಾಂಧಿ ಸ್ಮಾರಕದ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಮಾತನಾಡಿ, ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸ್ವಾತಂತ್ರ ಸಂಗ್ರಾಮದ ಬಗ್ಗೆ ಅಷ್ಟೇ ಹೇಳಿಕೊಡಲಾಗುತ್ತಿದೆ. ಅದರ ಜತೆಗೆ, ಕರ್ನಾಟಕ ಏಕೀಕರಣ ಚಳವಳಿಯನ್ನು ಪಠ್ಯವಾಗಿ ಹೇಳಿಕೊಡಬೇಕು. ಆ ಮೂಲಕ ನಿಜಾಮರಿಂದ, ಪಾಳೇಗಾರರಿಂದ ನಾಡನ್ನು ಪಡೆದ ರೀತಿಯನ್ನು ಎಲ್ಲರಿಗೂ ತಿಳಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ ಆರ್.ಕೆ.ಸ್ಪರ್ಶಾ, ಕಾಲೇಜಿನ ಶಿಕ್ಷಣ ದತ್ತಿ ಅಧ್ಯಕ್ಷ ಬಿ.ಎಂ.ಪಾರ್ಥಸಾರಥಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ನಾರಾಯಣಸ್ವಾಮಿ, ಉಪನ್ಯಾಸಕಿ ಕಾವ್ಯ ಉಪಸ್ಥಿತರಿದ್ದರು.

ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. ಆದರೆ, ಇಂದಿನ ನಮ್ಮ ಇತಿಹಾಸದಲ್ಲಿ ಪುರುಷರನ್ನಷ್ಟೇ ತೋರಿಸುತ್ತಿದ್ದು, ಮಹಿಳೆಯರ ಪಾತ್ರವನ್ನೇ ಮರೆಮಾಚಲಾಗಿದೆ.

 -ಇಂದಿರಾ ಕೃಷ್ಣಪ್ಪ, ಕರ್ನಾಟಕ ಗಾಂಧಿ ಸ್ಮಾರಕದ ಗೌರವ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News