ತಾಕತ್ತಿದ್ದರೆ ನನ್ನನ್ನು ಬಂಧಿಸಲಿ: ಬಿಜೆಪಿ ಶಾಸಕ ರೇಣುಕಾಚಾರ್ಯ ಸವಾಲು
ಬೆಂಗಳೂರು, ನ. 22: ಆಶ್ರಯ ಮನೆ, ಶೌಚಾಲಯ ನಿರ್ಮಾಣಕ್ಕೂ ಜನರಿಗೆ ಮರಳು ಸಿಗುತ್ತಿಲ್ಲ. ಜತೆಗೆ ಸರಕಾರಿ ಕಾಮಗಾರಿಗಳಿಗೂ ಮರಳು ಲಭ್ಯವಿಲ್ಲ. ಹೀಗಾಗಿ ರಾಜ್ಯ ಸರಕಾರ, ಮರಳು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯ ಮರಳು ತುಂಬುತ್ತೇನೆ, ಒಮ್ಮೆಯೂ ಯಾರೊಬ್ಬರೂ ನನ್ನನ್ನು ಏಕೆಂದು ಕೇಳಿಲ್ಲ. ಜನರೊಂದಿಗೆ ಸೇರಿ ಸೋಮವಾರದಿಂದ ಮತ್ತೆ ಹೋರಾಟ ಆರಂಭಿಸುತ್ತೇನೆ, ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹೊನ್ನಾಳಿಯಲ್ಲೆ ಸ್ಥಳೀಯರಿಗೆ ಮರಳು ಸಿಗುತ್ತಿಲ್ಲ. ಆರೇಳು ಸಾವಿರ ಆಶ್ರಯ ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿವೆ. ಇದರಿಂದ ಜನರು ಪರದಾಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
1,800 ರೂ.ಗಳಿಗೆ ಒಂದು ಟ್ರಾಕ್ಟರ್ ಲೋಡ್ ಮರಳು ನೀಡಬೇಕೆಂದು ನಾನು ಶಾಸಕನಾದ ಬಳಿಕ ಐದು ಬಾರಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿಲ್ಲ ಎಂದ ಅವರು, ಅಕ್ರಮ ಮರಳು ಸಾಗಣೆದಾರರನ್ನು ಬಿಟ್ಟು ಬೈಕ್‌ನಲ್ಲಿ ಮರಳು ತರುವ ಜನರ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಜನರ ಮೇಲೆ ಕೇಸು ಹಾಕುತ್ತಿರುವುದು ಸರಿಯಲ್ಲ ಎಂದು ಪ್ರಶ್ನಿಸಿದರೆ, ಕಾನೂನು ಎಂದು ಹೇಳುತ್ತಾರೆ. ಪ್ರತಿಭಟನೆ ರೂಪದಲ್ಲಿ ಮರಳು ತುಂಬಲು ಮುಂದಾದರೆ ನೂರಾರು ಮಂದಿ ಬಡವರು ಎತ್ತಿನಗಾಡಿಗಳಲ್ಲಿ ಬಂದು ಮರಳು ತುಂಬಿದ್ದಾರೆ. ಅವರ ಮೇಲೆಯೂ ಪೊಲೀಸರು ಕೇಸ್ ಹಾಕಿದ್ದಾರೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ನನ್ನ ಜತೆ ಮಾತನಾಡಿಲ್ಲ. ಕನಿಷ್ಠ ಪಕ್ಷ ಸಮಸ್ಯೆಯೇನೆಂದು ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿಲ್ಲ. ಹೀಗಾಗಿ ಜನರ ಪರವಾಗಿ ನಾನು ಕಾನೂನು ಉಲ್ಲಂಘನೆ ಮಾಡಲು ಸಿದ್ಧ. ಜನರಿಗೆ ದಂಗೆ ಏಳಲು ಕರೆ ನೀಡಿದ್ದೇನೆ ಎಂದರು.