ನ.26ರಿಂದ ದಿನಗೂಲಿ ನೌಕರರ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಬೆಂಗಳೂರು, ನ.22: ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ವತಿಯಿಂದ ಎನ್‌ಪಿಎಸ್ ರದ್ದತಿ, ಹೊರಗುತ್ತಿಗೆ ಹಾಗೂ ದಿನಗೂಲಿ ನೌಕರರ ಸಮಸ್ಯೆ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯನ್ನು ನ.26ರಿಂದ ಎರಡು ದಿನಗಳವರೆಗೆ ನಗರದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮಹದೇವಯ್ಯ ಮಠಪತಿ, ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ 2016ರಲ್ಲಿಯೇ ಸುಪ್ರೀಂ ಕೋರ್ಟ್ ಆದೇಶವಿತ್ತರೂ, ಈ ಬಗ್ಗೆ ರಾಜ್ಯ ಸರಕಾರ ಕ್ರಮ ಕೈಗೊಂಡಿರುವುದಿಲ್ಲ. ಮತ್ತೊಂದೆಡೆ, ನೌಕರರ ಮುಂಭಡ್ತಿ ವಿಷಯದಲ್ಲಿ ಸರಕಾರವು ಸ್ಪಷ್ಟ ಧೋರಣೆ ಹೊಂದಿಲ್ಲ. ಹೀಗಾಗಿ, ಎಲ್ಲ ಸಮಸ್ಯೆಗಳ ಬಗ್ಗೆ ನೌಕರರು ಎಚ್ಚೆತ್ತು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಆರನೇ ವೇತನ ಆಯೋಗದ ಎರಡನೇ ವರದಿಯಲ್ಲಿನ ನೌಕರ ವಿರೋಧಿ ಶಿಫಾರಸ್ಸುಗಳನ್ನು ಕೈಬಿಡುಬೇಕು. ದಿನಗೂಲಿ ಹೊರಗುತ್ತಿಗೆ ನೌಕರರನ್ನು ನಿಯಮಾನುಸಾರ ಖಾಯಂಗೊಳಿಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ಇಲಾಖೆಗಳಲ್ಲಿ ಹೊರಗುತ್ತಿಗೆ ಉದ್ಯೋಗವನ್ನು ರದ್ದುಗೊಳಿಸಬೇಕು. ಹಾಗೂ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು.